Advertisement

Bangalore-Chennai ಎಕ್ಸ್‌ಪ್ರಸ್‌ ಹೈವೇ ಲೋಕಾರ್ಪಣೆಗೆ ಸಜ್ಜು

09:39 PM Aug 17, 2023 | Team Udayavani |

ಕೋಲಾರ: ಗಂಟೆಗೆ 120 ಕಿ.ಮೀ. ವೇಗದಲ್ಲಿ ಕೇವಲ ಎರಡೂವರೆ ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ಮಹಾನಗರದ ತಲುಪಬಹುದಾದ ಭಾರತ ಮಾಲಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊಟ್ಟ ಮೊದಲ ಹಸಿರು ಹೆದ್ದಾರಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರಸ್‌ ಹೈವೇ ಲೋಕಸಭಾ ಚುನಾವಣೆಗೂ ಮುನ್ನ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ.

Advertisement

ಹಾಲಿ ಬೆಂಗಳೂರು-ಚೆನ್ನೈ ನಡುವೆ ಎರಡು ಹೆದ್ದಾರಿಗಳಿವೆ. ಹೊಸಕೋಟೆ-ಕೋಲಾರ ಮಾರ್ಗವಾಗಿರುವ ಹೆದ್ದಾರಿ 335 ಕಿ.ಮೀ. ಹಾಗೂ ಬೆಂಗಳೂರು-ಹೊಸೂರು ನಡುವೆ ಇರುವ ಹೆದ್ದಾರಿ 372 ಕಿ.ಮೀ. ದೂರ ಹೊಂದಿದ್ದು, ಹಾಲಿ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರಸ್‌ ಹೈವೇ 258 ಕಿ.ಮೀ. ದೂರದ್ದಾಗಿದೆ.  ಈಗ ಬೆಂಗಳೂರು-ಚೆನ್ನೈ ನಡುವೆ 6ರಿಂದ 7 ಗಂಟೆಗಳ ಪ್ರಯಾಣ ಕ್ರಮಿಸಬೇಕಾಗಿದ್ದು, ಎಕ್ಸ್‌ಪ್ರಸ್‌ ಹೈವೇಯಲ್ಲಿ ಈ ಸಮಯವನ್ನು ಕೇವಲ 2.50 ಗಂಟೆಯಿಂದ 4 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.

2011ರಲ್ಲಿ ಘೋಷಣೆ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರಸ್‌  ಯೋಜನೆಯನ್ನು 2011ರಲ್ಲಿ ರೂಪಿಸಲಾಗಿತ್ತು.  2020 ನವೆಂಬರ್‌ನಲ್ಲಿ ಒಟ್ಟು ಆರು ಕಂಪನಿಗಳಿಗೆ 10  ಪ್ಯಾಕೇಜ್‌ಗಳಲ್ಲಿ ಯೋಜನೆ ಪೂರ್ಣಗೊಳಿಸಲು ಟೆಂಡರ್‌ಒಪ್ಪಿಸಲಾಗಿತ್ತು. ಸುಮಾರು 17,930 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಗೆ ಪ್ರಧಾನಿ  ಮೋದಿಯವರು 2022 ಮೇ 26ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು. ಮಾರ್ಚ್‌ 2024ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಕಾಲಮಿತಿ ನೀಡಲಾಯಿತು.

ಮೂರು ರಾಜ್ಯಗಳು, ಐದು ಜಿಲ್ಲೆಗಳು: ಬೆಂಗಳೂರು-ಚೆನ್ನೈ ಎಕ್ಸ್‌ಪ್ರಸ್‌ ಹೈವೇ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮೂರು ರಾಜ್ಯಗಳ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ತೂರು, ರಾಣಿಪೇಟೈ ಹಾಗೂ ಕಾಂಚಿಪುರಂ ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಮೂರು ಹಂತಗಳಲ್ಲಿ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ. ಸದ್ಯಕ್ಕೆ ನಾಲ್ಕು ಲೇನ್‌ಗಳ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ 8 ಲೇನ್‌ಗಳಿಗೆ ವಿಸ್ತರಿಸಲು ಈಗಲೇ ಸ್ಥಳಾವಕಾಶ ಕಲ್ಪಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಶೇ.15 ರಿಂದ ಶೇ.80ರವರೆಗೆ ವಿವಿಧ ಹಂತಗಳ ಕಾಮಗಾರಿ ಪ್ರಗತಿಯಲ್ಲಿದೆ.

ಹಸಿರು ಹೆದ್ದಾರಿ: ದೇಶದ ಮೊದಲ ಹಸಿರು ಹೆದ್ದಾರಿ ಎಂದು ಈ ಯೋಜನೆಯನ್ನು ಕರೆಯಲಾಗುತ್ತಿದೆ. ಯೋಜನೆಗಾಗಿ ಕೇವಲ 33 ಕಿ.ಮೀ. ಜಾಗವನ್ನು ಮಾತ್ರವೇ ಅರಣ್ಯ ಪ್ರದೇಶದಲ್ಲಿ ಬಳಸಿಕೊಳ್ಳಲಾಗಿದೆ. ಸುಮಾರು 2 ಸಾವಿರ ಮರಗಳನ್ನು ಕಡಿಯಲಾಗಿದೆ. ಇದನ್ನು ತುಂಬಲು ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಪುನಶ್ಚೇತನ ಮಾಡಲಾಗುತ್ತಿದೆ. ಅಮೃತ ಮಹೋತ್ಸವ ಪಕ್ಷಿಧಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮರಗಳನ್ನು ಹೆಚ್ಚು ಬೆಳೆಸಲು ಯೋಜಿಸಲಾಗಿದೆ.

Advertisement

ಹೆದ್ದಾರಿಯ ಲಾಭಗಳೇನು?

ಬೆಂಗಳೂರು-ಚೆನ್ನೈಎಕ್ಸ್‌ಪ್ರಸ್‌ ಹೈವೇಯಿಂದಾಗಿ ಎರಡೂ ನಗರ ನಡುವಿನ ವಿಮಾನಯಾನದ ಒತ್ತಡ ಕಡಿಮೆಯಾಗಲಿದೆ. ಸಂಚಾರದ ಅವಧಿ ಕಡಿಮೆಯಾಗಲಿದೆ. ಸರಕು ಸಾಗಾಣೆ ವೆಚ್ಚ ಶೇ.16 ರಷ್ಟು ಕಡಿಮೆಯಾಗಲಿದೆ. ಮೂರು ರಾಜ್ಯಗಳ ಐದು ಜಿಲ್ಲೆಗಳಲ್ಲಿ ಹೆದ್ದಾರಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದರಿಂದ ಹೆದ್ದಾರಿ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸಹಕಾರಿಯಾಗಲಿದೆ. ಈಗಾಗಲೇ ಹೆದ್ದಾರಿಗೆ ಹೊಂದಿಕೊಂಡಂತೆ ಕೈಗಾರಿಕೆ  ಅರಂಭಿಸಲು ಸಿದ್ಧತೆ ನಡೆಯುತ್ತಿವೆ. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕಳೆದ ವರ್ಷ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ್ದಾರೆ. ಹೆದ್ದಾರಿಯು ಮಾರ್ಚ್‌ 2024 ರೊಳಗೆ ಲೋಕಾರ್ಪಣೆಯಾದರೂ, ಸಂಪೂರ್ಣಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯವಾಗಲು ಮುಂದಿನ ವರ್ಷ ಆಗಸ್ಟ್‌ವರೆಗೂ ಕಾಯಬೇಕಾಗಬಹುದು ಎನ್ನಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರಸ್‌ ಹೈವೇಗಾಗಿ 61 ಗ್ರಾಮಗಳ 666 ಹೆಕ್ಟೇರ್‌ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. 446 ಕೋಟಿ ಪರಿಹಾರ ವಿತರಿಸಲಾಗಿದೆ. ತಾಂತ್ರಿಕ ಕಾರಣಗಳಿಗಾಗಿ 108 ಕೋಟಿ ರೂ. ಪರಿಹಾರ ವಿತರಣೆ ಬಾಕಿ ಇದೆ. ಕೋಲಾರ ಜಿಲ್ಲೆಯಲ್ಲಿ ಹೈವೇಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

– ಶ್ರೀನಿವಾಸಶೆಟ್ಟಿ. ವ್ಯವಸ್ಥಾಪಕ, ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಸಕ್ರಮ ಪ್ರಾಧಿಕಾರ, ಎನ್‌ಎಚ್‌ಎಐ

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next