Advertisement

4 ರಿಂದ ಮರಾಠಾ ಸಮಾಜದ ಬೆಂಗಳೂರು ಚಲೋ

02:47 PM Mar 23, 2022 | Team Udayavani |

ಬೆಳಗಾವಿ: ರಾಜ್ಯದಲ್ಲಿರುವ ಮರಾಠಾ ಸಮಾಜದ ವಿವಿಧ ಬೇಡಿಕೆಗಳನ್ನು ಮಾ. 31ರ ವರೆಗೆ ಈಡೇರಿಸದಿದ್ದರೆ ಏ. 4ರಿಂದ ವಿಜಯಪುರದಿಂದ ಬೆಂಗಳೂರುವರೆಗೆ ರ್ಯಾಲಿ ನಡೆಸಿ ಏ. 8ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕ್ಷತ್ರಿಯ ಮರಾಠಾ ಸಮಾಜ ಒಕ್ಕೂಟದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್‌. ಶಾಮಸುಂದರ ಗಾಯಕವಾಡ, ಮರಾಠಾ ಸಮಾಜವನ್ನು 3ಬಿ ವರ್ಗದಿಂದ 2ಎ ಮೀಸಲಾತಿ ಕಲ್ಪಿಸಬೇಕು. ಬೆಳಗಾವಿ ಸುವರ್ಣ ವಿಧಾನಸೌಧ ಎದುರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು, ಶಾಸಕ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮರಾಠಾ ಸಮಾಜ ಅತಿ ಹಿಂದುಳಿದ ಸಮಾಜವಾಗಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದೆ. ಈ ಬಗ್ಗೆ ಅನೇಕ ಸಲ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮೆಲ್ಲ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳ ಅವಧಿಯಲ್ಲಿ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವುದಾಗಿ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದರು.

ಆದರೆ ಈಗ ಎರಡನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದರೂ ನಮ್ಮ ಭರವಸೆ ಮಾತ್ರ ಈಡೇರಿಸಿಲ್ಲ. ಮರಾಠಾ ಸಮಾಜದವರನ್ನು ಕೇವಲ ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಮರಾಠಾ ಸಮಾಜ ಬಾಂಧವರನ್ನು ನಿರ್ಲಕ್ಷಿಸುತ್ತ ಬಂದಿರುವ ರಾಜಕಾರಣಿಗಳನ್ನು ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಚುನಾವಣಾ ಬಹಿಷ್ಕರಿಸಲಾಗುವುದು. ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಘೋಷಿಸಲಾಗಿದೆ. ಆದರೆ 60 ಲಕ್ಷಕ್ಕೂ ಹೆಚ್ಚು ಜನ ಇರುವ ಮರಾಠಾ ಸಮಾಜಕ್ಕೆ ಕೇವಲ 50 ಕೋಟಿ ರೂ. ಅನುದಾನ ನೀಡಿದ್ದಾರೆ. ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

Advertisement

ಬೆಳಗಾವಿ ಸುವರ್ಣ ವಿಧಾನಸೌಧ ಎದುರು ನಿರ್ಮಾಣವಾಗಲಿರುವ ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಬೇಕು. ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಏ. 4ರಂದು ವಿಜಯಪುರದಿಂದ ರ್ಯಾಲಿಗೆ ಶ್ರೀ ವಿರೂಪಾಕ್ಷ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಏ. 5ರಂದು ನಿಪ್ಪಾಣಿ, ಸಂಕೇಶ್ವರ ಬೆಳಗಾವಿ, ಏ. 6ರಂದು ಹಳಿಯಾಳ, ಕಲಘಟಗಿ, ಹುಬ್ಬಳ್ಳಿ, ಏ. 7ರಂದು ಹೊಸಪೇಟೆ, ಗದಗ, ಕೊಪ್ಪಳ, ದಾವಣಗೆರೆ ಮೂಲಕ ಬೆಂಗಳೂರು ತಲುಪಿ ಏ. 8ರಂದು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.

ರಾಜ್ಯದ ಎಲ್ಲ ಜಿಲ್ಲೆಗಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಇದಕ್ಕೂ ಸರ್ಕಾರ ಬಗ್ಗದಿದ್ದರೆ 50 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜದ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲಾಗುವುದು ಎಂದರು.

ಮಾಜಿ ಶಾಸಕ ಮನೋಹರ ಕಡೋಲಕರ ಮಾತನಾಡಿ, ಶಾಮಸುಂದರ ಅವರಿಗೆ ವಿಧಾನ ಪರಿಷತ್‌ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು. ಕರ್ನಾಟಕದ ಪ್ರತಿ ಜಿಲ್ಲಾ ಮಟ್ಟದಲ್ಲಿ ಮರಾಠಾ ಭವನ ನಿರ್ಮಾಣ ಮಾಡಬೇಕು, ಮರಾಠ ಅಭಿವೈದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಜೆ.ಡಿ. ಘೋರ್ಪಡೆ, ರವಿಶಂಕರರಾವ್‌ ಮಹಾಡಿಕ್‌, ವಿಠ್ಠಲ ವಾಘಮೋಡೆ, ನಾಗರಾಜ ಗಾಯಕವಾಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next