Advertisement

ಜು.25ಕ್ಕೆ ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ

12:48 PM Jun 28, 2017 | |

ದಾವಣಗೆರೆ: ರಾಜ್ಯದ 5,653 ಗ್ರಾಮ ಪಂಚಾಯತಿಯಲ್ಲಿ ಕಳೆದ 20-25 ವರ್ಷದಿಂದ ಕೆಲಸ ಮಾಡುತ್ತಿರುವ ಜಾಡಮಾಲಿಗಳ ಕಾಯಮಾತಿಗೆ ಒತ್ತಾಯಿಸಿ ಜು. 25 ರಂದು ಬೆಂಗಳೂರು ಚಲೋ, ವಿಧಾನ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿ ನೌಕರರ ಫೆಡರೇಷನ್‌(ಎಐಟಿಯುಸಿ) ರಾಜ್ಯ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ತಿಳಿಸಿದ್ದಾರೆ. 

Advertisement

ಮಹಾನಗರ ಪಾಲಿಕೆ, ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ 10 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ಮುಂದಾಗಿರುವುದು ಸ್ತುತ್ಯಾರ್ಹ. ಗುತ್ತಿಗೆ ಪೌರ  ಕಾರ್ಮಿಕರರಂತೆ ಜಾಡಮಾಲಿಗಳನ್ನು ಸಹ ಕಾಯಂ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. 

ಜಾಡಮಾಲಿಗಳ ಕಾಯಂ, ಬಿಲ್‌ ಕಲೆಕ್ಟರ್‌,ನೀರುಗಂಟಿಗಳಿಗೆ ಕನಿಷ್ಠ ವೇತನ ನಿಗದಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು. 25 ರಂದು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ವಿಧಾನ ಸೌಧದ ವರೆಗೆ ಮೆರವಣಿಗೆ ನಡೆಸಿ, ಮುತ್ತಿಗೆ ಹಾಕಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್‌.ಕೆ. ಪಾಟೀಲ್‌ ಜಾಡಮಾಲಿಗಳ ಕಾಯಂ ಮಾಡುವ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

1993ರಲ್ಲಿ ಮಂಡಲ್‌ ಪಂಚಾಯತ್‌ನಿಂದ ಗ್ರಾಮ ಪಂಚಾಯತ್‌ ಗಳಿಗೆ ಜಾಡಮಾಲಿಗಳನ್ನು ವರ್ಗಾಯಿಸುವ ಸಂದರ್ಭದಲ್ಲಿ ರೂಪಿಸಲಾದ ನಿಯಮಾವಳಿ 112, 113 ರ ಪ್ರಕಾರ ಜಾಡಮಾಲಿಗಳಿಗೆ ಮಾಸಿಕ ವೇತನ, ದಿನ ಭತ್ಯೆ ಬಗ್ಗೆ ಪ್ರಸ್ತಾಪಿಸಲಾಗಿದೆ.

Advertisement

ಆದರೆ, ಕಾಯಂಬಗ್ಗೆ ಹೇಳಿಯೇ ಇಲ್ಲ. ಆ ಕಾರಣಕ್ಕೆ ಕಾಯಂ ಆಗುತ್ತಿಲ್ಲ. ಜಾಡಮಾಲಿಗಳಲ್ಲಿ ಬಹುತೇಕರು ಸಹ ಪೌರ ಕಾರ್ಮಿಕರಂತೆ ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದನ್ನು ಸರ್ಕಾರ ಗಮನಿಸಿ, ಕಾಯಂ ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು. 

ರಾಜ್ಯದ 30 ಜಿಲ್ಲೆ, 176 ತಾಲೂಕು, 29,193 ಹಳ್ಳಿಗಳಿಗೆ ಸಂಬಂಧಿಸಿದ 5,653 ಗ್ರಾಮ ಪಂಚಾಯತ್‌ನಲ್ಲಿ ಜಾಡಮಾಲಿಗಳಿಗೆ ಆಯಾಯ ಪಂಚಾಯತ್‌ನಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಶೇ. 40ರ ಭಾಗದಲ್ಲಿ ವೇತನ ನೀಡಬೇಕು ಎಂಬ ನಿಯಮ ಇದೆ.

ಇದರಿಂದ ಜಾಡಮಾಲಿಗಳಿಗೆ ನಿಯಮಿತವಾಗಿ ವೇತನ ದೊರೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರವೇ ತಾನೇ ನಿಗದಿ ಪಡಿಸಿರುವ ಕನಿಷ್ಠ ವೇತನವನ್ನ ನೇರವಾಗಿ ಜಾಡಮಾಲಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು. ಜಾಡಮಾಲಿಗಳಂತೆ ಬಿಲ್‌ ಕಲೆಕ್ಟರ್‌, ಜವಾನರು, ನೀರಗಂಟಿಗಳ ಕಾಯಂ ಮಾಡಬೇಕು.

ವೇತನಕ್ಕೆ ಸರ್ಕಾರದಿಂದಲೇ ಪ್ರತ್ಯೇಕ ಅನುದಾನ ಮೀಸಲಿಡುವುದು, ಬಾಕಿ ವೇತನ ಬಿಡುಗಡೆ ಒಳಗೊಂಡಂತೆ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಆನಂದರಾಜ್‌, ಆವರಗೆರೆ ವಾಸು, ಆವರಗೆರೆ ಎನ್‌.ಟಿ. ಬಸವರಾಜ್‌ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next