Advertisement
ಅಹ್ಮದಾಬಾದ್: ಪ್ರೊ ಕಬಡ್ಡಿ 7ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ. ಬುಲ್ಸ್ ಹಾಲಿ ಚಾಂಪಿಯನ್ ಆಗಿದ್ದರೆ, ಮುಂಬಾ 2015ರಲ್ಲಿ ಪ್ರಶಸ್ತಿ ಎತ್ತಿ, 2016ರ ಫೈನಲ್‌ನಲ್ಲಿ ಎಡವಿತ್ತು. ನೆಚ್ಚಿನ ತಂಡಗಳಾಗಿದ್ದರೂ ಇವುಗಳ ಸೋಲು ಸಹಜವಾಗಿಯೇ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಸೋಲಿಗೇನು ಕಾರಣ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಇಷ್ಟು ದೂರ ಬಂದರೂ, ಇದು ಒನ್ ಮ್ಯಾನ್ ಶೋ ಆಗಿತ್ತೆಂಬುದನ್ನು ಮರೆಯುವಂತಿಲ್ಲ. ಲೀಗ್ ಹಂತದಿಂದ ಸೆಮಿಫೈನಲ್ ವರೆಗೆ ತಂಡಕ್ಕೆ ಬೆನ್ನೆಲುಬಾಗಿ ನಿಂತವರು ಪವನ್ ಸೆಹ್ರಾವತ್. ತಮ್ಮ ರೈಡಿಂಗ್ ಸಾಹಸದಿಂದ ಇಡೀ ತಂಡವನ್ನು ಎತ್ತಿ ನಿಲ್ಲಿಸುತ್ತಿದ್ದರು. ಅಂತಿಮ 4-5 ನಿಮಿಷಗಳಲ್ಲಿ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಛಾತಿ ಇವರದಾಗಿತ್ತು. ಕೊನೆಯ ತನಕವೂ ಸೆಹ್ರಾವತ್ ಹೋರಾಟ ಅಮೋಘ ಮಟ್ಟದಲ್ಲೇ ಇತ್ತು. ಆದರೆ ತಂಡದ ಸಹ ಆಟಗಾರ ವೈಫಲ್ಯ ಬುಲ್ಸ್‌ಗೆ ಮುಳುವಾಯಿತು. ಕೂಟದುದ್ದಕ್ಕೂ ನಾಯಕ ರೋಹಿತ್ ಕುಮಾರ್ ಮತ್ತು ಇತರ ಆಟಗಾರರು ಸತತ ವೈಫಲ್ಯ ಕಾಣುತ್ತಲೇ ಹೋದರು. ಒಂದು ಕಾಲದಲ್ಲಿ ನಮ್ಮ ಕ್ರಿಕೆಟ್ ತಂಡ ಸಚಿನ್ ತೆಂಡುಲ್ಕರ್ ಅವರನ್ನು ಹೇಗೆ ಅವಲಂಬಿಸಿತ್ತೋ, ಅದೇ ರೀತಿ ಬುಲ್ಸ್ ಸೆಹ್ರಾವತ್ ಅವರೊಬ್ಬರನ್ನೇ ನಂಬಿ ಕುಳಿತಿತ್ತು!
Related Articles
Advertisement
ಮುಂಬಾ ಅಂತಿಮ ಹಂತದ ಎಡವಟ್ಟುಯು ಮುಂಬಾದ್ದು ಇನ್ನೊಂದು ಕತೆ. ಕೊನೆಯ 3 ನಿಮಿಷದ ವರೆಗೂ ಮುನ್ನಡೆಯಲ್ಲಿದ್ದ ಮುಂಬಾ ಅಂತಿಮ ಹಂತದ ಎಡವಟ್ಟಿನಿಂದ ಬೆಂಗಾಲ್‌ಗೆ ಶರಣಾಗಬೇಕಾಯಿತು. ಬೆಂಗಾಲ್ ನಾಯಕ ಮಣಿಂದರ್ ಸಿಂಗ್ ಅನುಪಸ್ಥಿತಿಯ ಲಾಭವನ್ನು ಬಳಸಿಕೊಳ್ಳುವಲ್ಲಿಯೂ ವಿಫಲವಾಯಿತು. ಮುಂಬಾ ಪರ ಕೊನೆಯ ರೈಡಿಂಗ್ ನಡೆಸಿದ ಅರ್ಜುನ್ ಜೈಸ್ವಾಲ್ ಅವರಿಗೆ ಪಂದ್ಯವನ್ನು ಟೈ ಮಾಡುವ ಅವಕಾಶವೊಂದಿತ್ತು ಆದರೆ ಬಲ್‌ದೇವ್ ಸಿಂಗ್ ಇದಕ್ಕೆ ಅಡ್ಡಿಯಾದರು. ಬಲಿಷ್ಠ ತಂಡವಾಗಿದ್ದ ಮುಂಬಾ, ಲೀಗ್ ಹಂತದಲ್ಲಿ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡಿತ್ತು. ಆದರೆ ಸೆಮಿಯಲ್ಲಿ ಅದೃಷ್ಟ ಕೈಕೊಟ್ಟಿತು. ಬೆಂಗಾಲ್ ಪರ ಕನ್ನಡಿಗ ಸುಕೇಶ್ ಹೆಗ್ಡೆ ಮತ್ತು ಪ್ರಪಂಚನ್ ಮಿಂಚಿನ ರೈಡಿಂಗ್ ಮೂಲಕ ಗಮನ ಸೆಳೆದರು. ಯಾರಿಗೆ ಮೊದಲ ಕಿರೀಟ?
ಮುಂದಿನ ಕುತೂಹಲವೆಂದರೆ, ಈ ಬಾರಿ ಯಾರಿಗೆ ಮೊದಲ ಪ್ರೊ ಕಬಡ್ಡಿ ಕಿರೀಟ ಎನ್ನುವುದು. ಡೆಲ್ಲಿ ಮತ್ತು ಬೆಂಗಾಲ್ ಇದೇ ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು, ಯಾರೇ ಗೆದ್ದರೂ ಪ್ರೊ ಕಬಡ್ಡಿಯ ನೂತನ ಚಾಂಪಿಯನ್ ಆಗಿ ಮೂಡಿಬರಲಿದ್ದಾರೆ. ಈ ಅದೃಷ್ಟ ಯಾರಿಗಿದೆ? ಶನಿವಾರ ರಾತ್ರಿ ಉತ್ತರ ಸಿಗಲಿದೆ.