Advertisement

ವಿರಸದ ನಡುವೆ ನೀರಸ ಮತದಾನ

10:07 AM May 30, 2019 | Naveen |

ಬೆಂಗಳೂರು: ಕೆಲ ಅಹಿತಕರ ಘಟನೆಗಳ ನಡುವೆ ಬಿಬಿಎಂಪಿಯ ಎರಡು ವಾರ್ಡ್‌ಗಳ ಉಪಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಆದರೆ, ಎರಡೂ ವಾರ್ಡ್‌ಗಳಲ್ಲಿ ಮತದಾರರ ನಿರಾಸಕ್ತಿ ಕಂಡುಬಂದಿದ್ದು, ಸಗಾಯಪುರದಲ್ಲಿ ಶೇ.44.82 ಮತ್ತು ಕಾವೇರಿಪುರದಲ್ಲಿ ಕೇವಲ ಶೇ.39.34ರಷ್ಟು ಮತದಾನವಾಗಿದೆ.

Advertisement

ಬಿಬಿಎಂಪಿಯ ಕೊನೆಯ ಅವಧಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಕಾವೇರಿಪುರ ಹಾಗೂ ಸಗಾಯಪುರ ಉಪಚುನಾವಣೆ ನಿರ್ಣಾಯಕವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಪರಿಣಾಮ ಕೆಲವೆಡೆ ಕಾರ್ಯಕರ್ತರು ಕಿತ್ತಾಡಿದ ಘಟನೆಗಳು ನಡೆದಿವೆ.

ಅತಿಹೆಚ್ಚು ಸೂಕ್ಷ್ಮಮತಗಟ್ಟೆಗಳನ್ನು ಹೊಂದಿದ್ದ ಸಗಾಯಪುರ ವಾರ್ಡ್‌ನಲ್ಲಿ ಮತದಾನ ಶಾಂತಿಯುತವಾಗಿ ನಡೆದರೆ, ಕಾವೇರಿಪುರ ವಾರ್ಡ್‌ನಲ್ಲಿ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ಕಿತ್ತಾಡಿದ್ದಾರೆ. ಒಂದು ಹಂತದಲ್ಲಿ ದೊಣ್ಣೆ-ರಾಡ್‌ ಹಿಡಿದು ಹೊಡೆದಾಟಕ್ಕೆ ಇಳಿದ ಕಾರ್ಯಕರ್ತರ ಮೆಲೆ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದರು.

ದೊಣ್ಣೆ ಹಿಡಿದ ಕಾರ್ಯಕರ್ತರು: ಕಾವೇರಿಪುರ ವಾರ್ಡ್‌ನಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ದೊಣ್ಣೆಗಳಿಂದ ಹೊಡೆದಾಡಿದ್ದರು. ಅದು ಚುನಾವಣೆಯ ದಿನವೂ ಮುಂದುವರಿದಿದ್ದರಿಂದ ವಾರ್ಡ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ವಾರ್ಡ್‌ನ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.ಆದರೆ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಬಿಎಂಪಿಯ ಬಿಜೆಪಿ ಸದಸ್ಯರಾದ ಉಮೇಶ್‌ ಶೆಟ್ಟಿ, ದಾಸೇಗೌಡ, ಮೋಹನ್‌ಕುಮಾರ್‌ ಹಾಗೂ ಅವರ ಬೆಂಬಲಿಗರು ಮುನೇಶ್ವರನಗರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಲು ಬಂದಿದ್ದರು. ಅದಕ್ಕೆ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌ ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಕೊನೆಗೆ ದೊಣ್ಣೆ ಹಿಡಿದು ಬಡಿದಾಡುವ ಮಟ್ಟ ತಲುಪಿತು. ಕೊನೆಗೆ ಪೊಲೀಸರು ಲಾಠಿ ಪ್ರಹಾರ ನಡೆಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

Advertisement

ಸಣ್ಣಪುಟ್ಟ ಗಾಯ: ಗಲಾಟೆಯ ವೇಳೆ ಜೆಡಿಎಸ್‌ನ ಇಬ್ಬರು ಕಾರ್ಯಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದು, ತಮ್ಮ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದಾರೆ.

ಬಿರಿಯಾನಿ ವಿತರಣೆ: ಸಗಾಯಪುರ ಹಾಗೂ ಕಾವೇರಿಪುರ ವಾರ್ಡ್‌ ಉಪಚುನಾವಣೆಯ ಕಣದಲ್ಲಿದ್ದ ಬಹುತೇಕ ಅಭ್ಯರ್ಥಿಗಳು ಮತದಾರರಿಗೆ ಬಿರಿಯಾನಿ ಪ್ಯಾಕೇಟ್ ಹಂಚಿದ್ದು ಕಂಡುಬಂತು. ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಪ್ರತಿಯೊಂದು ಬಡಾವಣೆಗಳಲ್ಲಿ ಬಿರಿಯಾನಿ ಹಾಗೂ ಪಲಾವ್‌ ಪ್ಯಾಕೇಟ್‌ಗಳನ್ನು ರಾಜಾರೋಷವಾಗಿ ಹಂಚಿದರೂ ಚುನಾವಣಾಧಿಕಾರಿಗಳು ಕ್ರಮಕ್ಕೆ ಮುಂದಾಗಲಿಲ್ಲ.

ಮತಗಟ್ಟೆಗಳು ಖಾಲಿ ಖಾಲಿ!: ಸಗಾಯಪುರ ವಾರ್ಡ್‌ ಉಪಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್‌ನಲ್ಲಿ 31 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ, ನ್ಯೂ ಬಾಗಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ರೌಂಡ್‌ ಟೇಬಲ್ ಶಾಲೆ) ಹೊರತುಪಡಿಸಿದರೆ ಉಳಿದ ಮತಗಟ್ಟೆಗಳಲ್ಲಿ ನೀರಸ ಮತದಾನ ಕಂಡುಬಂತು. ಕಾವೇರಿಪುರ ವಾರ್ಡ್‌ನಲ್ಲೂ ಬೆಳಗ್ಗೆ 11ರ ನಂತರ ಬಹುತೇಕ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.

ಶಾಂತಿಯುತ ಮತದಾನ: ಸಗಾಯಪುರ ವಾರ್ಡ್‌ ನಲ್ಲಿ ನಿರ್ಮಿಸಿದ 31 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಿದ್ದರಿಂದ ಹೆಚ್ಚಿನ ಪೊಲೀಸ್‌ ಭದ್ರತೆ ನೀಡಲಾಗಿತ್ತು. ಆದರೆ, ವಾರ್ಡ್‌ನ ಎಲ್ಲ ಮಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು ಪೊಲೀಸರು ನಿರಾಳರಾಗುವಂತೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next