ಮುಂಬಯಿ: ಉಪನಗರಗಳಲ್ಲಿನ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಮುಂಬಯಿಯಲ್ಲಿ ಇತ್ತೀಚಿಗೆ ಕೋವಿಡ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದ್ದು, ಇಲ್ಲಿನ ಕೆಲವು ಕಚೇರಿಗಳ ಸಿಬಂದಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, ಬಿಕೆಸಿಯಲ್ಲಿ ಕೆಲಸ ಮಾಡುವ 60 ಜನರು ಕಳೆದ ಒಂದು ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಪಾಸಿಟಿವ್ ಪರೀಕ್ಷೆಗೊಳಗಾದವರಲ್ಲಿ ಹೆಚ್ಚಿನವರು ದಕ್ಷಿಣ ಮುಂಬಯಿಯ ಡಿ ವಾರ್ಡ್‌ನಲ್ಲಿ ವಾಸಿಸುತ್ತಿದ್ದಾರೆ.
ಇದರಲ್ಲಿ ಮಲಬಾರ್ ಹಿಲ್, ನೇಪಿಯನ್ ಸೀ ರೋಡ್ ಮತ್ತು ತಾರೆವ್ ಇನ್ನಿತರ ಪ್ರದೇಶಗಳು ಸೇರಿದ್ದು, ಈ ಸ್ಥಳಗಳಲ್ಲಿ ಕಳೆದ ಮೂರು ದಿನಗಳಿಂದ ದಿನಕ್ಕೆ 100ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಡಿ ವಾರ್ಡ್ ನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕಾರಣದಿಂದಾಗಿ, ಕಳೆದ ವಾರ ಬಿಎಂಸಿ ನೇಪಿಯನ್ ಸೀ ರಸ್ತೆಯಲ್ಲಿರುವ ಉನ್ನತ ಮಟ್ಟದ ವಸತಿ ಕಟ್ಟಡದ ಎರಡು ವಿಂಗ್ ಗಳನ್ನು ಮೊಹರು ಮಾಡಿತು.
ಇದುವರೆಗೂ ಬಿಎಂಸಿ ವಸತಿ ಪ್ರದೇಶಗಳಲ್ಲಿ ಜನರನ್ನು ಮಾತ್ರ ಪರೀಕ್ಷಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಮಿಷನ್ ಬಿಗಿನ್ ಎಗೇನ್ ಉಪಕ್ರಮದ ಅಡಿಯಲ್ಲಿ ನಗರವು ತೆರೆದುಕೊಳ್ಳುತ್ತಿರುವುದರಿಂದ, ಹೆಚ್ಚಿನ ಜನರು ಕೆಲಸದ ಸ್ಥಳಗಳಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಬಿಎಂಸಿಯು ಬಿಕೆಸಿಯಲ್ಲಿ ಕೆಲಸ ಮಾಡುವ 600ಕ್ಕೂ ಅಧಿಕ ಮಂದಿಯನ್ನು ಪರೀಕ್ಷಿಸಿದೆ.