ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಮೂರು ಚಿರತೆಗಳು ಮೃತಪಟ್ಟಿರುವ ಬಗ್ಗೆ ಗುರುವಾರ ವರದಿಯಾಗಿದೆ. ಒಂದು ವಿಷ ಪ್ರಾಸನದಿಂದ, ಮತ್ತೆರಡು ಕಾದಾಟದಿಂದ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೀಟನಾಶಕ ಸಿಂಪಡಿಸಿದ್ದ ನಾಯಿಯ ಮೃತದೇಹ ತಿಂದು ಸಾವು: ರೈತರೊಬ್ಬರ ಜಮೀನಿನಲ್ಲಿ ಕೀಟನಾಶಕ ಸಿಂಪಡಿಸಿದ್ದ ನಾಯಿಯ ಮೃತದೇಹ ತಿಂದು ಚಿರತೆ ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿಯೋಜನೆ ಗುಂಡ್ಲುಪೇಟೆ ಉಪ ವಿಭಾಗ ವ್ಯಾಪ್ತಿಯ ಕೂತನೂರು ಗ್ರಾಮದ ಸರ್ವೆ ನಂ-68ರಲ್ಲಿ ನಡೆದಿದ್ದು, ಘಟನೆಗೆ ಕಾರಣನಾದ ಆರೋಪಿಯನ್ನು ಬಂಧಿಸಲಾಗಿದೆ.
ಮಲ್ಲಯ್ಯನಪುರ ಗ್ರಾಮದ ರಮೇಶ ಬಿನ್ ಚಿಕ್ಕಮಾದೇಗೌಡ ಬಂಧಿತ. ಸಾವನ್ನಪ್ಪಿರುವುದು 3 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ. ಕೂತನೂರು ಗ್ರಾಮದ ಸರ್ವೆ ನಂ-68ರ ಜಿ.ಆರ್.ಗೋವಿಂದರಾಜು ಜಮೀನಿನಲ್ಲಿ ಚಿರತೆ ಮೃತಪಟ್ಟಿರುವ ವಿಷಯ ತಿಳಿದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಅವರು ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್‍ಕುಮಾರ್ ಹಾಗು ನೌಕರರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ಧಾರೆ. ಸರ್ವೆ ನಂ-64 ರಲ್ಲಿರುವ ಜಿ.ಆರ್.ಗೋವಿಂದರಾಜು ಅವರ ಸಹೋದರ ಸೋಮಶೇಖರ್ ಜಮೀನಿನಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ ಬಗ್ಗೆ ಸಂಶಯ ವ್ಯಕ್ತದ ಹಿನ್ನೆಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಮೀನಿನಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಕೊಂದಿತ್ತು. ನಾಯಿಯ ಕಳೆಬರದ ಮೇಲೆ ಕೀಟನಾಶಕವನ್ನು ಸಿಂಪಡನೆ ಮಾಡಿದ್ದು, ಮತ್ತೆ ಬಂದು ತಿಂದಿದ್ದರಿಂದ ಚಿರತೆ ಸಾವನ್ನಪಿದೆ. ನಾನೇ ವಿಷ ಸಿಂಪಡನೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ಧಾನೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಬಫರ್ eóÉೂೀನ್ ವಲಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾದಾಟದಿಂದ ಗಾಯಗೊಂಡು ಚಿರತೆ ಸಾವು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರ ಉಪ ವಿಭಾಗದ ಜೆ.ಎಸ್.ಬೆಟ್ಟ ವಲಯ ಹಂಗಳ ದಕ್ಷಿಣ ಶಾಖೆಯ ಕಲ್ಲಿಗೌಡನಹಳ್ಳಿ ಗಸ್ತಿನ ವ್ಯಾಪ್ತಿಗೆ ಒಳಪಡುವ ಮಂಗಳ ಗ್ರಾಮದ ಸರ್ವೆ-18 ರ ಜಮೀನಿನಲ್ಲಿ ಸುಮಾರು ಎರಡುವರೆ ವರ್ಷದ ಹೆಣ್ಣು ಚಿರತೆಯೊಂದು ಕಾದಾಟದಿಂದ ಸಾವನ್ನಪ್ಪಿದೆ.
ಚಿರತೆ ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರೊಬ್ಬರು ಉಪ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಚಿರತೆಯೊಂದು ಸತ್ತು ಬಿದ್ದಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಚಿರತೆಯು ಕಾದಾಟದಿಂದ ಗಾಯಗೊಂಡು ಸತ್ತಿರಬಹುದೆಂದು ಮರಣೋತ್ತರ ಪರೀಕ್ಷೆಯಿಂದ ಅಂದಾಜಿಸಲಾಗಿದೆ. ನಂತರ ಚಿರತೆಯ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕಣಿಯನಪುರ ಬಳಿ ಗಂಡು ಚಿರತೆ ಸಾವು: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ ಬಳಿ 5 ವರ್ಷದ ಗಂಡು ಚಿರತೆ ಕಾದಾಟದಿಂದ ಸಾವನ್ನಪ್ಪಿದೆ. ಬಂಡೀಪುರ ಅರಣ್ಯ ಸಿಬ್ಬಂದಿ ವರ್ಗದವರು ಗಸ್ತು ನಡೆಸುವ ಸಂದರ್ಭದಲ್ಲಿ ಚಿರತೆ ಮೃತಪಟ್ಟಿರುವುದು ತಿಳಿದು ಬಂದಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಮೇಲ್ನೋಟಕ್ಕೆ ಕಾದಾಟದಿಂದ ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಮೂರು ಚಿರತೆಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಚಿರತೆಗಳ ಕಳೆಬರವನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‍ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಇತರರು ಹಾಜರಿದ್ದರು.