ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ 9 ಗಂಟೆವರೆಗಿನ ಸಂಚಾರದಿಂದ ಕಾಡು ಪ್ರಾಣಿಗಳ ಸಹಜ ಸಂಚಾರಕ್ಕೆ ತೊಂದರೆಯಾಗು ತ್ತಿರುವ ಕಾರಣ ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೂ ಸಂಚಾರ ನಿಷೇಧಿಸಬೇಕೆಂದು ಪರಿಸರವಾದಿಗಳ ಕೂಗು ಮತ್ತಷ್ಟು ಪ್ರಬಲ ಕೇಳಿಬಂದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ತಮಿಳುನಾಡು ಹಾಗೂ ಕೇರಳ ಎರಡು ಗಡಿಭಾಗ ಹೊಂದಿಕೊಂಡಿರುವ ಹಿನ್ನೆಲೆ ಪ್ರತಿನಿತ್ಯ ಸಾವಿರಾರು ಅಂತಾರಾಜ್ಯ ವಾಹನಗಳು ಬಂಡೀಪುರ ಅಭಯಾರಣ್ಯ ಮಾರ್ಗದಲ್ಲಿ ಸಂಚರಿಸುತ್ತವೆ.
ಈ ವೇಳೆ ಅನೇಕ ವಾಹನಗಳು ನಿಯಮ ಪಾಲನೆ ಮಾಡದ ಕಾರಣ, ಅನಾಹುತಗಳು ನಿರಂತರವಾಗಿ ನಡೆಯುತ್ತಲೇ ಇದೆ. ಈ ಹಿಂದೆ ಜಿಂಕೆ, ನವಿಲು, ಕಾಡುಹಂದಿ ಸೇರಿ ಇನ್ನಿತರ ಹಲವು ಸಣ್ಣಪುಟ್ಟ ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿವೆ. ಆದರೆ ಮಂಗಳವಾರ ರಾತ್ರಿ ಲಾರಿಯೊಂದು ಭಾರೀ ಗಾತ್ರದ ಆನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆನೆ ಸ್ಥಳದಲ್ಲೇ ಸಾವನ್ನಪ್ಪಿರುವುದು ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಕೆಲ ವರ್ಷಗಳ ಹಿಂದೆ ಕೇರಳ ರಾಜ್ಯವು ರಾತ್ರಿ ಸಂಚಾರ ತೆರವು ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕಾಡುಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಅದನ್ನು ತಿರಸ್ಕರಿಸಲಾಗಿತ್ತು. ಆದರೆ ಇದೀಗ ಕೇರಳಕ್ಕೆ ತೆರಳುವ ಮಾರ್ಗ ಮಧ್ಯದ ಮದ್ದೂರು ವಲಯ ವ್ಯಾಪ್ತಿಯಲ್ಲಿ ಆನೆಯೊಂದು ಅಪಘಾತದಲ್ಲಿ ಮೃತಪಟ್ಟಿರುವುದು ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ಯಾವ ಪ್ರಮಾಣ ದಲ್ಲಿ ತೊಂದರೆಯಾಗುತ್ತದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದೆ. ಈ ಕಾರಣದಿಂದ ಬಂಡೀಪುರದಲ್ಲಿ ರಾತ್ರಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಒತ್ತಾಯಿಸಿದ್ದಾರೆ.
ರಾತ್ರಿ ವೇಳೆಯೇ ಕಾಡುಪ್ರಾಣಿಗಳ ಸಂಚಾರ ಹೆಚ್ಚು: ಸಾಮಾನ್ಯವಾಗಿ ಕಾಡು ಪ್ರಾಣಿಗಳು ರಾತ್ರಿ ವೇಳೆಯೇ ಹೆಚ್ಚಿನ ರೀತಿಯಲ್ಲಿ ಸಂಚಾರ ಮಾಡುತ್ತವೆ. ಈ ಸಂದರ್ಭ ವಾಹನ ಸಂಚಾರ ಇಲ್ಲದಿದ್ದರೆ ಅವುಗಳ ಸಹಜ ಜೀವನ ಶೈಲಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ರಾತ್ರಿ ವಾಹನ ಸಂಚಾರ ಬೇಡ. ಇದನ್ನು ಅರಣ್ಯ ಇಲಾಖೆಯು ಪರಿಗಣಿಸಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಪರಿಸರವಾದಿ ಆನಂದ್ ಮನವಿ ಮಾಡಿದರು.
ಕಡ್ಡಾಯವಾಗಿ ವೇಗ ಮಿತಿ ಅವಶ್ಯಕ: ರಾತ್ರಿ ವೇಳೆ ಲಾರಿಯಂತಹ ದೊಡ್ಡ ವಾಹನವು ಅತೀ ವೇಗದಿಂದ ಬಂದ ಪರಿಣಾಮ ಭಾರೀ ಗಾತ್ರದ ಆನೆ ಮೃತಪಟ್ಟಿದೆ. ಆನೆಯಂತಹ ಪ್ರಾಣಿಗಳಿಗೆ ಹೀಗಾದರೆ ಸಣ್ಣಪುಟ್ಟ ಕಾಡು ಪ್ರಾಣಿಗಳ ಗತಿ ಏನು?. ಆದ್ದರಿಂದ ಬೆಳಗ್ಗೆ ಅಥವಾ ರಾತ್ರಿ ಸಂಚಾ ರದಲ್ಲಿ ವಾಹನಗಳಿಗೆ ವೇಗಮಿತಿಯನ್ನು ಕಡ್ಡಾಯ ವಾಗಿ ಅಳವಡಿಸುವುದು ಅತ್ಯವಶ್ಯಕವಾಗಿದೆ.
ರಸ್ತೆ ಹಂಪ್ ಹೆಚ್ಚಿಸಿ: ಬಂಡೀಪುರದಿಂದ ಕೇರಳ ಮತ್ತು ತಮಿಳುನಾಡಿಗೆ ತೆರಳುವ ರಸ್ತೆಯ ಮಾರ್ಗ ಮಧ್ಯೆದಲ್ಲಿ ಹಾಕಲಾಗಿರುವ ಹಂಪ್‌ಗ್ಳ ಅಂತರ ತುಂಬಾ ದೂರವಿರುವ ಕಾರಣ ವಾಹನಗಳು ಅತೀ ವೇಗದಿಂದ ಬರುತ್ತಿದೆ. ಈ ಹಿನ್ನೆಲೆ ರಸ್ತೆ ಹಂಪ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಬೇಕು.
ನಿಯಮ ಮೀರಿದರೆ ದೊಡ್ಡ ಪ್ರಮಾಣದ ದಂಡ ವಿಧಿಸಿ: ಅಭಯಾರಣ್ಯ ವ್ಯಾಪ್ತಿಯಲ್ಲಿ ಸಂಚರಿಸುವ ಅನೇಕ ವಾಹನ ಸವಾರರು ಕಾಡುಪ್ರಾಣಿಗಳನ್ನು ಕಂಡ ಕೂಡಲೇ ವಾಹನ ನಿಲ್ಲಿಸಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಜೊತೆಗೆ ಹಲವು ಮಂದಿ ಅತಿ ವೇಗದಿಂದ ಸಂಚರಿಸುತ್ತಾರೆ. ಇಂತವರಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುವ ಕೆಲಸ ಮಾಡಬೇಕೆಂದು ಸಾಮಾಜಿಕ ಹೋರಟಗಾರ ಶಿವಕುಮಾರ್ ಆಗ್ರಹಿಸಿದರು.
ಬಂಡೀಪುರ ಅಭಯಾರಣ್ಯ ದಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧ ಮಾಡಬೇಕು. ಹೀಗಿದ್ದಲ್ಲಿ ಕಾಡು ಪ್ರಾಣಿಗಳ ಸಹಜ ಜೀವನ ಶೈಲಿಗೆ ಪೂರಕವಾಗುತ್ತದೆ. ಇಲ್ಲದಿದ್ದರೆ ಒಂದಿಲ್ಲೊಂದು ಪ್ರಕರಣಗಳು ನಡೆಯುತ್ತಲೇ ಇರುತ್ತದೆ. –
ಜೋಸೆಫ್ ಹೂವರ್, ಪರಿಸರವಾದಿ
●ಬಸವರಾಜು ಎಸ್.ಹಂಗಳ