Advertisement

ಬಂಡೀಪುರ ಸಫಾರಿ ನೂತನ ಕೌಂಟರ್‌ಗೆ ಚಾಲನೆ

09:27 PM Jun 02, 2019 | Lakshmi GovindaRaj |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ವಿಶೇಷ ಹುಲಿ ಸಂರಕ್ಷಣಾ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿರುವ ಬಂಡಿಪುರ ವಲಯ ಸಫಾರಿ ಚಟುವಟಿಕೆಗಳಿಗೆ ಭಾನುವಾರ ಚಾಲನೆ ನೀಡಲಾಯಿತು.

Advertisement

ರಾಷ್ಟ್ರೀಯ ಹುಲಿಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಬಂಡೀಪುರದ ಹಳೆ ಕೌಂಟರ್‌ನಿಂದ ಮೇಲುಕಾಮನಹಳ್ಳಿಗೆ ಸ್ಥಳಾಂತರವಾಗಿರುವ ಪರಿಸರ ಪ್ರವಾಸೋದ್ಯಮ ಸಫಾರಿ ಚಟುವಟಿಕೆಗಳಿಗೆ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಭಾನುವಾರ ಮುಂಜಾನೆ ಹಸಿರು ನಿಶಾನೆ ತೋರಿದರು.

ಸಫಾರಿಗೆಂದು ಆಗಮಿಸಿದ್ದ ಪ್ರವಾಸಿಗರಿಗೆ ಟಿಕೇಟು ವಿತರಿಸಿ ಸಫಾರಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಶಾಸಕರು ಸ್ಥಳಾಂತರಗೊಂಡಿರುವ ಸಫಾರಿ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ನೀಡಿದರು.

ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಮಾತನಾಡಿ, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರ ಹುಲಿ ರಕ್ಷಿತ ಅರಣ್ಯಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಹುಲಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳ ದರ್ಶನ ಸಫಾರಿ ವೇಳೆ ಆಗುತ್ತಿದೆ. ದೇಶ ವಿದೇಶದ ಪ್ರವಾಸಿಗರಿಗೆ ಬಂಡಿಪುರ ನಿರಾಸೆ ಮಾಡುವುದಿಲ್ಲ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಫಾರಿ ಕೌಂಟರ್‌ ಇದ್ದ ಈ ಹಿಂದಿನ ಸ್ಥಳದಲ್ಲಿ ಜನ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಪ್ರಸ್ತುತ ಸ್ಥಳಾಂತರವಾಗಿರುವ ಕೌಂಟರ್‌ ಪ್ರದೇಶ ವಿಶಾಲವಾಗಿದೆ. ಸದ್ಯಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿಕೊಡಲಾಗಿದೆ. ಇನ್ನೂ 4 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಮೂಲ ಸೌಕರ್ಯ ಒದಗಿಸಿಕೊಡಲಾಗುವುದು. ಟೆಂಡರ್‌ ಮೂಲಕ ಪ್ರಕ್ರಿಯೆ ನಡೆಸಿ ಕಾಮಗಾರಿ ಪೂರೈಸಲಾಗುವುದು ಎಂದು ತಿಳಿಸಿದರು.

Advertisement

ಬಂಡಿಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, 5.18 ಕೋಟಿ ವೆಚ್ಚದಲ್ಲಿ ನೂತನ ಕೌಂಟರ್‌ ಆಕರ್ಷಕ ಹಾಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲು ಹಂತ ಹಂತವಾಗಿ ಕಾಮಗಾರಿ ನಡೆಸಲಾಗುವುದು. ಬಸ್‌ ಹಾಗೂ ಜೀಪುಗಳಲ್ಲಿ ಸಫಾರಿಗೆ ತೆರಳುವವರ ಮುಂಗೈಗೆ ಬಣ್ಣದ ಬ್ಯಾಂಡ್‌ ಹಾಕುವ ಮೂಲಕ ಟಿಕೆಟ್‌ ಖರೀದಿ ಮಾಡದವರನ್ನು ಪತ್ತೆ ಹಚ್ಚಲಾಗುವುದು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎಸ್‌.ರವಿಕುಮಾರ್‌, ಎಂ.ಎಸ್‌.ನಟರಾಜು, ಕೆ.ಪರಮೇಶ್ವರ್‌, ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸನಾಯ್ಕ, ರಾಘವೇಂದ್ರ, ಮಂಜುನಾಥ್‌, ನವೀನ್‌ ಕುಮಾರ್‌, ಶೈಲೇಂದ್ರ, ಮಹದೇವು, ಪುಟ್ಟರಾಜು, ಮಂಜುನಾಥ ಹೆಬ್ಟಾರ್‌ ಇದ್ದರು.

ಶಾಸಕರಿಂದ ಶುಭಾರಂಭ: ಭಾನುವಾರ ಬೆಳಗ್ಗೆ ನಿಗದಿತ 6.30ಕ್ಕೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಕೌಂಟರ್‌ ಉದ್ಘಾಟಿಸಿ ಪ್ರವಾಸಿಗರಿಗೆ ಟಿಕೆಟ್‌ ನೀಡಿ ಶುಭ ಹಾರೈಸಿದರು. ನಂತರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಸಫಾರಿಗೆ ವಿದ್ಯುಕ್ತ ಚಾಲನೆ ನೀಡಿದರು. ಇವರೊಂದಿಗೆ ಪತ್ನಿ ಸವಿತಾ, ಪುತ್ರ ಭುವನ್‌, ಮುಖಂಡರಾದ ಪ್ರಣಯ್‌, ಕಣ್ಣನ್‌, ಮಂಜುನಾಥ್‌ ಇದ್ದರು.

ಸಫಾರಿ ಅವಧಿ ಅರ್ಧ ಗಂಟೆ ಹೆಚ್ಚಳ: ಭಾನುವಾರ ಹಾಗೂ ಇತರೆ ರಜೆ ದಿನಗಳಲ್ಲಿ ಬಂಡಿಪುರಕ್ಕೆ ಆಗಮಿಸುವವರ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಇದ್ದ ಸಫಾರಿ ಕೌಂಟರ್‌ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿತ್ತು. ಅಲ್ಲದೆ ರಾಷ್ಟ್ರೀಯ ಹುಲಿಸಂರಕ್ಷಣಾ ಪ್ರಾಧಿಕಾರ ಸಹ ಸ್ಥಳಾಂತರಕ್ಕೆ ನಿರ್ದೇಶನ ನೀಡಿತ್ತು.

ಇನ್ನು ಸಫಾರಿ ಅವಧಿ ಕಡಿತವಾಗುವುದಿಲ್ಲ. ಅರ್ಧ ಗಂಟೆಗಳ ಹೆಚ್ಚುವರಿ ಸಮಯ ನಿಗದಿ ಮಾಡಲಾಗಿದೆ. ಜಂಗಲ್‌ ಲಾಡ್ಜ್ನಲ್ಲಿ ಇರುವವರು ಅಲ್ಲಿಂದಲೇ ಸಫಾರಿಗೆ ತೆರಳಲು ಅವಕಾಶ ಇದೆ ಎಂದು ಬಂಡಿಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಬಾಲಚಂದ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next