ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ತಮಿಳುನಾಡು ಮತ್ತು ಕೇರಳದ ಹೆದ್ದಾರಿಯಲ್ಲಿ ಹಗಲು ಸಂಚಾರ ನಿರ್ಭಂದಿಸದಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕರ್ನಾಟಕ ಗಡಿ ಭಾಗವಾದ ಮದ್ದೂರು ಚೆಕ್‌ಪೋಸ್ಟ್ ಸಮೀಪ ಪ್ರತಿಭಟನೆ ನಡೆಸಿದರು. ಪಟ್ಟಣದಿಂದ ವಾಹನಗಳ ಮೂಲಕ ಸಾಗಿದ ಪದಾಧಿಕಾರಿಗಳು ಮದ್ದೂರು ಚೆಕ್‌ಪೋಸ್ಟ್ ಮುಂಭಾಗ ಸಮಾವೇಶಗೊಂಡು ಕೆಲಕಾಲ ರಸ್ತೆ ತಡೆ ನಡೆಸಿ, ಸುಪ್ರೀಂ ಕೋರ್ಟ್ ಹೆದ್ದಾರಿ ಬಂದ್ ಮಾಡುವ ಬಗ್ಗೆ ಆದೇಶ ನೀಡುವ ಮೊದಲು ಪರಿಶೀಲನೆ ನಡೆಸಲಿ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಘೋಷಣೆ ಕೂಗಿದರು.
ಸಾವಿರಾರೂ ರೈತರಿಗೆ ಅನ್ಯಾಯ: ನಂತರ ಕಾವಲುಪಡೆ ಅಧ್ಯಕ್ಷ ಅಬ್ದುಲ್ ಮಾಲೀಕ್ ಮಾತನಾಡಿ, ಕೇರಳ ಮತ್ತು ತಮಿಳುನಾಡಿಗೆ ಹೆದ್ದಾರಿ ಮೂಲಕ ಪಟ್ಟಣದ ಮಾರುಕಟ್ಟೆಯಿಂದ ತರಕಾರಿ ಮತ್ತಿತರೆ ಸಾಮಗ್ರಿಗೆ ಹೋಗುತ್ತದೆ. ಈ ರಸ್ತೆಯನ್ನು ವನ್ಯಜೀವಿಗಳ ಸಂಚಾರಕ್ಕೆ ತೊಂದರೆ ಯಾಗುತ್ತದೆ ಎಂದು ಹಗಲು ಬಂದ್ ಮಾಡಿದರೆ ಸಾವಿರಾರು ರೈತರು ಮತ್ತು ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಈಗಾಗಲೇ ರಾತ್ರಿ 9 ರಿಂದ ಮುಂಜಾನೆ 6ರ ವರೆಗೆ ಸಂಚಾರ ನಿರ್ಭಂದಿಸಲಾಗಿದೆ ಎಂದರು.
ಯಥಾಸ್ಥಿತಿ ಕಾಪಾಡಲು ಮನವಿ: ಈಗಾಗಲೇ ಕೇರಳ ಸರ್ಕಾರ ರಾತ್ರಿ ನಿರ್ಭಂದ ರದ್ದುಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ಇದನ್ನು ಪರಿಶೀಲಿಸಿರುವ ಸುಪ್ರೀಂಕೋರ್ಟ್ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದರೆ ಹಗಲು ಸಂಚಾರವನ್ನು ಬಂದ್ ಮಾಡಬಹುದು. ಈ ನಿಟ್ಟಿನಲ್ಲಿ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ಮಾಡಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ರೀತಿ ಆದೇಶವನ್ನು ನ್ಯಾಯಾಲಯ ಹೊರಡಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿಸಿದರೆ ಕೇರಳ ಮತ್ತು ತಮಿಳುನಾಡಿಗೆ ಪಟ್ಟಣದಿಂದ ಹಣ್ಣು- ತರಕಾರಿಗಳು ಸಾಗಣೆಯಾಗುತ್ತಿದೆ. ಇದರಿಂದ ಸಂಪೂರ್ಣವಾಗಿ ಮಾರುಕಟ್ಟೆಯ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಕೂಲಿ ಕಾರ್ಮಿಕರ ಮತ್ತು ವ್ಯಾಪಾರಸ್ಥರ ಹಿತದೃಷ್ಟಿಯಿಂದ ಹಾಲಿ ಇರುವ ಹಾಗೆಯೇ ಯಥಾಸ್ಥಿತಿ ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕು ಎಂದು ಒತ್ತಾಯಿಸಿದರು.
ಹಗಲು ಸಂಚಾರ ಬಂದ್ ಮಾಡಬೇಡಿ: ಕರವೇ ಜಿಲ್ಲಾಧ್ಯಕ್ಷ ಮೋಹನ್ ಮಾತನಾಡಿ, ಪಟ್ಟಣ ಹಾಗೂ ತಾಲೂಕಿನ ವಿವಿಧ ರೈತರು ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ಮಾರಾಟ ಮಾಡುವುದರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ತರಕಾರಿಗಳನ್ನು ಕೇರಳ ರಾಜ್ಯ ಹೆಚ್ಚಾಗಿ ಖರೀದಿಸುತ್ತಿರುವುದರಿಂದ ಈ ಭಾಗದ ಹೆದ್ದಾರಿ ಹಗಲು ಸಂಚಾರ ಬಂದ್ ಮಾಡಿದರೆ ಪಟ್ಟಣ ಮತ್ತು ತಾಲೂಕಿನ ರೈತಾಪಿ ವರ್ಗಕ್ಕೆ ಮತ್ತು ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ ಎಂದರು.
ಹುನ್ನಾರ ನಡೆಯುತ್ತಿದೆ: ಮಾನವ ಬಂಧುತ್ವ ವೇದಿಕೆ ಸಂಚಾಲಕ ಮಾಡ್ರಹಳ್ಳಿಸುಭಾಷ್ ಮಾತನಾಡಿ, ಮುಂದಿನ ದಿನಗಳಲ್ಲಿ ಹಗಲು ಸಂಚಾರ ಬಂದ್ ಮಾಡುವ ಹುನ್ನಾರ ನಡೆದರೆ ನಿರಂತರವಾಗಿ ನಮ್ಮ ಸಂಘಟನೆ ಪ್ರತಿಭಟನೆ ನಡೆಸುತ್ತದೆ ಎಂದರು. ಛಲವಾದಿ ಮಹಾಸಭಾ ಅಧ್ಯಕ್ಷ ಸೋಮಣ್ಣ, ತಮಿಳು ಸಂಘದ ಅಧ್ಯಕ್ಷ ಸನ್ನಿಯಪ್ಪನ್, ಮುಖಂಡರಾದ ರಿಯಾಜ್‌ಪಾಷಾ, ನಾಗೇಶನಾಯಕ್, ರಮೇಶ್, ನಾಗೇಂದ್ರ, ಅಶೋಕ್, ರಾಜು, ಮಂಜು, ಯಶವಂತ್, ಭಾಗ್ಯರಾಜ್, ಸಾದಿಕ್‌ಪಾಷಾ, ವೆಂಕಟೇಶಗೌಡ, ಮಂಜುನಾಥ್, ಎಸ್.ಮುಬಾರಕ್, ಟೈಲರ್‌ಶಕೀಲ್, ಅಬ್ದುಲ್ ಸಲೀಂ, ಮಹೇಶ್, ರವಿ, ಮಹೇಂದ್ರರಾವ್, ಯೋಗೇಶ್, ರಾಮೇಗೌಡ ಇತರರು ಇದ್ದರು.