Advertisement

ಬಂಡೀಪುರ: ರಾತ್ರಿ ಸಂಚಾರ ತೆರವಿನ ಲಾಬಿ ಪರ ನಿಂತ ರಾಹುಲ್‌

11:19 PM Oct 04, 2019 | Lakshmi GovindaRaju |

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೇಲೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಒತ್ತಾಯಿಸಿ ಕೇರಳದ ವೈನಾಡಿನಲ್ಲಿ ನಿರಶನ ನಡೆಸುತ್ತಿರುವವರನ್ನು ಶುಕ್ರವಾರ ಭೇಟಿಯಾಗಿ ಬೆಂಬಲ ಸೂಚಿಸಿರುವ ರಾಹುಲ್‌ ಗಾಂಧಿಯವರ ನಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಅವರಿಗಿರುವ ಅರಿವಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

Advertisement

ಇಂದು ದೇಶದಲ್ಲಿ ಜೀವ ವೈವಿಧ್ಯತೆಯುಳ್ಳ ಅರಣ್ಯಗಳು, ಅಪರೂಪದ ವನ್ಯಜೀವಿಗಳು ಅಳಿವಿನ ಅಂಚಿನಲ್ಲಿವೆ. ಉಳಿದಿರುವ ಅಷ್ಟಿಷ್ಟು ಅರಣ್ಯವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಸರ್ಕಾರದ, ಜನಪ್ರತಿನಿಧಿಗಳ, ರಾಜಕಾರಣಿಗಳ, ಸಾರ್ವಜನಿಕರ ಕರ್ತವ್ಯವಾಗಿದೆ. ಭಾರತದಲ್ಲಿ ಒಟ್ಟು 50 ಹುಲಿ ಸಂರಕ್ಷಿತ ಅರಣ್ಯಗಳಿವೆ. ಕರ್ನಾಟಕದಲ್ಲಿ ಐದು ಹುಲಿ ರಕ್ಷಿತ ಅರಣ್ಯಗಳಿದ್ದು, ಹುಲಿ ಸಂರಕ್ಷಣೆಯಲ್ಲಿ ಮಾಡಿರುವ ಕ್ರಮಗಳಿಗಾಗಿ ಬಂಡೀಪುರ ಅರಣ್ಯಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ವನ್ಯಜೀವಿ ಸಂಸ್ಥೆ ಮೊದಲ ರ್‍ಯಾಂಕ್‌ ನೀಡಿದೆ. ಅಂದಾಜು 130 ಹುಲಿಗಳು ಬಂಡೀಪುರ ಅರಣ್ಯದಲ್ಲಿ ಜೀವಿಸುತ್ತಿವೆ.

ಇಂಥ ಅಪರೂಪದ ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರವನ್ನು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ನಿಷೇಧಿಸಲಾಗಿದೆ. ಕೇರಳಕ್ಕೆ ಸಂಪರ್ಕಿಸುವ ರಾ.ಹೆ. 766 ಇಲ್ಲಿ ಹಾದು ಹೋಗುತ್ತದೆ. ಕಳೆದ ಲೋಕಸಭಾ ಚುನಾವಣೆಯವರೆಗೂ ಇದರ ಬಗ್ಗೆ ಯಾವುದೇ ಚಕಾರ ಎತ್ತದ ರಾಹುಲ್‌, ವೈನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಳಿಕ ಮತಗಳಿಕೆಗಾಗಿ ವನ್ಯಜೀವಿಗಳಿಗೆ ಮಾರಕವಾಗಬಹುದಾದ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವ ಪ್ರಯತ್ನಗಳಲ್ಲಿ ನಿರತರಾಗಿದ್ದಾರೆ.

ಓರ್ವ ಸಂಸದರಾಗಿ ಕೇರಳದ ತಮ್ಮ ಕ್ಷೇತ್ರದ ಕೆಲವು ಜನರ ಪರ ನಿಂತಿರುವ ರಾಹುಲ್‌, ತಮ್ಮ ಅಜ್ಜಿ ಇಂದಿರಾಗಾಂಧಿಯವರೇ ಆರಂಭಿಸಿದ ಹುಲಿ ಯೋಜನೆಯ ಆಶಯಗಳಿಗೆ ವಿರುದ್ಧವಾಗಿದ್ದೇನೆ ಎಂಬುದನ್ನು ಮರೆತಿದ್ದಾರೆ. ವನ್ಯಜೀವಿಗಳ ರಕ್ಷಣೆ ಎಲ್ಲರ ಹೊಣೆ ಎಂಬುದನ್ನೂ ಮರೆತು ಮತಬ್ಯಾಂಕ್‌ ಪರವಾಗಿರುವುದು ಬಂಡೀಪುರ ಅರಣ್ಯದ ಸಂರಕ್ಷಣೆಗಾಗಿ ಪಣತೊಟ್ಟಿರುವ ಎಲ್ಲರನ್ನೂ ಕೆರಳಿಸಿದೆ.

ಬೇರೆ ಯಾವುದೇ ಯೋಜನೆ, ಹೋರಾಟಗಳಲ್ಲಿ ಈ ಪರಿ ತೊಡಗಿಸಿಕೊಳ್ಳದ ರಾಹುಲ್‌, ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗಾಗಿ ಕೇರಳ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಈಗ ನಿಷೇಧ ತೆರವಿಗೆ ಪ್ರತಿಭಟಿಸುತ್ತಿರುವವರ ಪರ ವಹಿಸಿದ್ದಾರೆ. ಪರ್ಯಾಯ ರಸ್ತೆ ನಿರ್ಮಿಸಬಹುದು. ಆದರೆ, ಪರ್ಯಾಯ ಅರಣ್ಯ, ಪರ್ಯಾಯ ವನ್ಯಜೀವಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನು ರಾಹುಲ್‌ ಅರಿಯದಿರುವುದು ವಿಪರ್ಯಾಸ.

Advertisement

ತಮಿಳುನಾಡು ವಿರೋಧ ಇಲ್ಲ!: ಬಂಡೀಪುರದ ನಡುವೆ ಇನ್ನೊಂದು ರಾಷ್ಟ್ರೀಯ ಹೆದ್ದಾರಿ 67, ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಕೂಡ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಆದರೆ, ತಮಿಳುನಾಡು ನಿಷೇಧವನ್ನು ಒಪ್ಪಿಕೊಂಡಿದೆ. ಯಾವುದೇ ಪ್ರತಿರೋಧ ತೋರಿಲ್ಲ. ಜತೆಗೆ, ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆಯೇ ಇರುವ ಸತ್ಯಮಂಗಲ ದಿಂಬಂ ಅರಣ್ಯದ ಘಟ್ಟ ಪ್ರದೇಶದಲ್ಲಿ ತಾನೂ ಸಹ ರಾತ್ರಿ ಸಂಚಾರವನ್ನು ನಿಷೇಧಿಸಿದೆ.

ವನ್ಯಜೀವಿ ತಜ್ಞರ ಅಭಿಪ್ರಾಯ: ಮರಳು ಕಳ್ಳ ಸಾಗಣೆದಾರರು, ಖಾಸಗಿ ಬಸ್‌ಗಳಲ್ಲಿ ತೆರಿಗೆ ವಂಚಿಸಿ ಸರಕು ಸಾಗಣೆ ಮಾಡುವವರು, ಕಾನೂನು ಬಾಹಿರವಾಗಿ ಜಾನುವಾರು ಸಾಗಣೆ ಮತ್ತು ಇತ್ತೀಚೆಗೆ ಕೇರಳದಿಂದ ಕರ್ನಾಟಕಕ್ಕೆ ಆಸ್ಪತ್ರೆ ಕಸ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಹೊಲಸನ್ನು ತಂದು ಸುರಿಯುವವರ ದುಷ್ಟಕೂಟಗಳು ಈ ವಿರೋಧದ ಹಿಂದಿರುವ ಜನ. ಇವರನ್ನು ಬೆಂಬಲಿಸುತ್ತಿರುವುದು ಏಕೆ? ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಪ್ರಶ್ನಿಸಿದ್ದಾರೆ.

ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧವನ್ನು ವನ್ಯಜೀವಿಗಳ ಸಂರಕ್ಷಣೆಯ ದೃಷ್ಠಿಯಿಂದ ನ್ಯಾಯಾಲಯ ಆದೇಶಿಸಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯ ಮತ್ತು ಕೇಂದ್ರದ ಎಲ್ಲಾ ಪಕ್ಷಗಳ ಸರ್ಕಾರಗಳು ಬೆಂಬಲಿಸಿವೆ. ಬಹುಮುಖ್ಯವಾಗಿ ರಾಜ್ಯ ಸರ್ಕಾರ, 75 ಕೋಟಿ ರೂ. ವೆಚ್ಚದಲ್ಲಿ ಪರ್ಯಾಯ ರಸ್ತೆಯನ್ನು ಅಬಿವೃದ್ಧಿಪಡಿಸಿದೆ. ಕೇರಳ ಸರ್ಕಾರ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಮಾಡಿದ ಮನವಿಯ ಮೇರೆಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next