Advertisement

ಬಂಡೀಪುರ ಆನೆ ಕಾರಿಡಾರ್‌ ವಿಸ್ತರಣೆ ನಿರೀಕ್ಷೆ?

02:56 PM Nov 18, 2023 | Team Udayavani |

ಚಾಮರಾಜನಗರ: ಆನೆಗಳು ಒಂದು ಅರಣ್ಯದಿಂದ ಮತ್ತೂಂದಕ್ಕೆ ಸಂಚರಿಸಲು ಕಾರಿಡಾರ್‌ ಬಹಳ ಅಗತ್ಯವಾಗಿದೆ. ರಾಜ್ಯ ಸರ್ಕಾರ ಅದರ ವಿಸ್ತರಣೆಗೆ ಆಸಕ್ತಿ ವಹಿಸಿದೆ. ಜಿಲ್ಲೆಯ ಬಂಡೀಪುರದ ಮಾಯಾರ್‌ -ಕಣಿಯನಪುರ ಆನೆ ಕಾರಿಡಾರ್‌ ವಿಸ್ತರಣೆ ಬಹುದಿನದ ಬೇಡಿಕೆಯಾಗಿದ್ದು, ಇದು ಈಡೇರುವ ನಿರೀಕ್ಷೆ ಮೂಡಿದೆ.

Advertisement

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮಾಯಾರ್‌- ಕಣಿಯನಪುರ ಆನೆ ಕಾರಿಡಾರ್‌ ಪ್ರಮುಖವಾದದ್ದು. ತಮಿಳುನಾಡು ಹಾಗೂ ಕನಾಬಂಡೀಪುರದ ಅಭಯಾರಣ್ಯದ ಮೂಲಕ ಈ ಕಾರಿಡಾರ್‌ ಹಾದು ಹೋಗಿದೆ. ಎರಡೂ ರಾಜ್ಯಗಳ ಅರಣ್ಯ ಪ್ರದೇಶಗಳನ್ನು ಆನೆಗಳು ಹಾದು ಹೋಗಲು ಈ ಕಾರಿಡಾರ್‌ ಅಗತ್ಯವಾಗಿದೆ.

ಏನಿದು ಆನೆ ಕಾರಿಡಾರ್‌?: ಆನೆಗಳು ಸಂಘ ಜೀವಿಗಳಾಗಿದ್ದು, ಒಂದು ಅರಣ್ಯದಿಂದ ಇನ್ನೊಂದು ಅರಣ್ಯಕ್ಕೆ ನೂರಾರು ಕಿ.ಮೀ. ದೂರ ಸಂಚರಿಸುತ್ತಲೇ ಇರುತ್ತವೆ. ಹೀಗೆ ಸಂಚರಿಸಲು ಅವು ತನ್ನದೇ ಆದ ಮಾರ್ಗವನ್ನು ಈ ಹಿಂದಿನಿಂದಲೂ ಕಂಡುಕೊಂಡಿವೆ. ಹೀಗೆ ಆನೆಗಳು ಕಂಡು ಕೊಂಡು ಬಹಳ ದೂರ ಕ್ರಮಿಸುವ ಮಾರ್ಗವನ್ನೇ ಆನೆ ಮೊಗಸಾಲೆ ಅಥವಾ ಕಾರಿಡಾರ್‌ ಎಂದು ಕರೆಯಲಾಗುತ್ತದೆ.

ಸಂಘರ್ಷ ತಗ್ಗಿಸಲು ಕಾರಿಡಾರ್‌ ವಿಸ್ತರಣೆ ಆಗಲಿ: ಕಾಡಾನೆಗಳ ಸುಗಮ ಸಂಚಾರ, ಮಾನವ-ಪ್ರಾಣಿ ಸಂಘರ್ಷವನ್ನು ತಗ್ಗಿಸಲು ಈ ಕಾರಿಡಾರ್‌ ವಿಸ್ತರಣೆಯಾಗಬೇಕಾಗಿದೆ. ಇದಕ್ಕಾಗಿ 500 ರಿಂದ 600 ಎಕರೆ ಖಾಸಗಿ ಭೂಮಿಯನ್ನು ಖರೀದಿಸಿ ಅರಣ್ಯೀಕರಣಗೊಳಿಸಬೇಕಾಗಿದೆ. ಈಗಾಗಲೇ ಈ ಸಂಬಂಧ ಅರಣ್ಯ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

ಭೂಮಿ ಖರೀದಿ: ರಾಜ್ಯ ಸರ್ಕಾರ ಆನೆ ಕಾರಿಡಾರ್‌ ಗಳ ವಿಸ್ತರಣೆಗೆ ಚಿಂತನೆ ನಡೆಸಿದ್ದು, ಮೊದಲ ಹಂತದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ 3 ಸಾವಿರ ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಮಾರಾಟ ಮಾಡಲು ರೈತರು ಮುಂದೆ ಬಂದಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಇತ್ತೀಚಿಗೆ ತಿಳಿಸಿದ್ದಾರೆ.

Advertisement

ಈ ಕ್ರಮ ರಾಜ್ಯದ ಇತರೆ ಅರಣ್ಯಗಳ ಆನೆ ಕಾರಿಡಾರ್‌ಗಳ ವಿಸ್ತರಣೆಗೂ ಹಾದಿಯಾಗಲಿದೆ ಎಂಬ ವಿಶ್ವಾಸ ವನ್ಯಜೀವಿ ಪ್ರಿಯರಲ್ಲಿ ಮೂಡಿದೆ.

ಕಾರಿಡಾರ್‌ಗೆ 600 ಎಕರೆ ಭೂಮಿ ಅಗತ್ಯ: ಬಹಳ ವರ್ಷಗಳಿಂದಲೂ ಬಂಡೀಪುರ ವ್ಯಾಪ್ತಿಯ ಕಣಿಯನಪುರ ಆನೆ ಕಾರಿಡಾರ್‌ ವಿಸ್ತರಣೆಗೆ ಒತ್ತಾಯ ಕೇಳಿ ಬರುತ್ತಲೇ ಇದೆ. ಆದ್ದರಿಂದಲೇ ಅರಣ್ಯ ಇಲಾಖೆ ಸಹ ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿದೆ. 2020ರ ಮಾಹಿತಿ ಪ್ರಕಾರ 106 ಎಕರೆ ಭೂಮಿ ಮಾರಾಟ ಮಾಡಲು ರೈತರು ಮುಂದೆ ಬಂದಿದ್ದರು. ವಿಸ್ತರಣೆಗೆ ಒಟ್ಟು 500 ರಿಂದ 600 ಎಕರೆ ಭೂಮಿ ಅಗತ್ಯವಾಗಿದೆ.ಸದ್ಯ ಆನೆ ಕಾರಿಡಾರ್‌ ಕಿರಿದಾಗಿರುವುದರಿಂದ ಕಾಡಾನೆಗಳು ತಮ್ಮ ಸಂಚಾರದ ವೇಳೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಆದರೆ, ಅವುಗಳ ಸಂಚಾರಕ್ಕೆ, ಆಹಾರಕ್ಕೆ ಧಕ್ಕೆ ಬಾರದಿರುವಂತೆ ಕಾರಿಡಾರ್‌ ವಿಸ್ತಾರವಾಗಿದ್ದರೆ, ಈ ಸಂಘರ್ಷ ತಪ್ಪಲಿದೆ. ಆದ್ದರಿಂದಲೇ ಆನೆ ಕಾರಿಡಾರ್‌ ವಿಸ್ತರಣೆ ಅಗತ್ಯ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಚಾಮರಾಜನಗರ ತಾಲೂಕಿನ ಅರಕಲವಾಡಿ, ಸುವರ್ಣನಗರ ಭಾಗದಲ್ಲಿ ಪದೇ ಪದೆ ಕಾಡಾನೆಗಳು ರೈತರ ಜಮೀನು, ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಪಾರ ಬೆಳೆ ನಷ್ಟ ಸಂಭವಿಸುತ್ತಿದೆ. ಈ ಪ್ರದೇಶ ಸಹ ಕಣಿಯನಪುರ ಕಾರಿಡಾರ್‌ ವ್ಯಾಪ್ತಿಯ ಭಾಗ. ಆ ಮಾರ್ಗ ವಿಸ್ತಾರಗೊಳ್ಳದಿರುವುದು ಆನೆಗಳು ರೈತರ ಜಮೀನಿಗೆ ಲಗ್ಗೆ ಇಡಲು ಕಾರಣವೆಂಬುದು ಅರಣ್ಯಾಧಿಕಾರಿಗಳ ಅಭಿಮತ.

ಆನೆ ಕಾರಿಡಾರ್‌ಗಳಿಗೆ ತಲತಲಾಂತರದ ನಂಟು: ಆನೆಗಳು ಹಿಂದಿನ ತಮ್ಮ ಪೂರ್ವ ತಲೆಮಾರುಗಳಿಂದ ಕಂಡುಕೊಂಡಿರುವ ಮಾರ್ಗವನ್ನು ಮುಂದಿನ ತಲೆಮಾರಿನ ಆನೆಗಳೂ ಅನುಸರಿಸುತ್ತವೆ. ಅದೇ ಮಾರ್ಗದಲ್ಲೇ ಸಂಚರಿಸುತ್ತಾ ತಮ್ಮ ಆಹಾರ, ಆಶ್ರಯ ತಾಣಗಳನ್ನು ಕಂಡುಕೊಳ್ಳುತ್ತಾ ಸಾಗುತ್ತವೆ. ಹೀಗಾಗಿ ಆನೆ ಕಾರಿಡಾರ್‌ಗಳಿಗೆ ತಲತಲಾಂತರದ ನಂಟಿದೆ. ಮುಂದೆಯೂ ಇರಲಿದೆ. ಹೀಗಾಗಿ ಆನೆ ಕಾರಿಡಾರ್‌ಗಳ ವಿಸ್ತರಣೆ ಅಗತ್ಯ ಎಂಬುದು ವನ್ಯಜೀವಿ ಪ್ರಿಯರ ಒತ್ತಾಯವಾಗಿದೆ.

ಮಾಯಾರ್‌ ಕಣಿಯನಪುರ ಆನೆ ಕಾರಿಡಾರ್‌ ಜಾಗವನ್ನು ವಿಸ್ತರಿಸುವ ಸಲುವಾಗಿ ಜಮೀನುಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮಕೈಗೊಂಡು ಜಾರಿಗೊಳಿಸಿದರೆ ಆನೆಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮಾನವ ಪ್ರಾಣಿ ಸಂಘರ್ಷ ಪ್ರಮಾಣವೂ ಕಡಿಮೆಯಾಗಲಿದೆ. – ಡಾ.ರಮೇಶ್‌ಕುಮಾರ್‌, ನಿರ್ದೇಶಕ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.

– ಕೆ.ಎಸ್‌.ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next