ಗುಂಡ್ಲುಪೇಟೆ(ಚಾಮರಾಜನಗರ): ಕೆರೆಯ ಬಳಿ ಅಸ್ವಸ್ಥಗೊಂಡು ಬಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯಲ್ಲಿ ಮೊಳೆಯೂರು ವಲಯ ಮತ್ತು ಶಾಖೆಯ ವದ್ಲಿ ಪೂರ್ವ ಗಸ್ತಿನ ಹಿಡುಗಲಪಂಚಿ ಕೆರೆ ಬಳಿ ಸೋಮವಾರ ನಡೆದಿದೆ.
ಸುಮಾರು 25 ರಿಂದ 30 ವರ್ಷ ಪ್ರಾಯದ ಹೆಣ್ಣಾನೆಯೊಂದು ಮೇ.19ರಂದು ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ನಂತರ ಮೇಲಾಧಿಕಾರಿಗಳಿಗೆ ಮಾಹಿತಿ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಮೊಳೆಯೂರು ವಲಯ ಅರಣ್ಯಾಧಿಕಾರಿ ಅಮೃತಮಾಯಪ್ಪನವರ್, ಇಲಾಖಾ ಪಶುವೈಧ್ಯಾಧಿಕಾರಿ ಡಾ.ವಾಸೀಂಮಿರ್ಜಾ ಭೇಟಿ ನೀಡಿ ಪರಿಶೀಲಿಸಿ ಆನೆ ಅನಾರೋಗ್ಯವಾಗಿದ್ದ ಕಾರಣ ಇಲಾಖಾ ವೈದ್ಯರು ಶುಶ್ರೂಷೆ ಮಾಡಿದ್ದರು.
ಆದರೆ ಮೇ 20 ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕಾಡಾನೆಯು ಮೃತಪಟ್ಟಿತ್ತು.
ನಂತರ ಮರಣೋತ್ತರ ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಕಾಡಾನೆಯ ಅಂಗಾಂಗಳ ಮಾದರಿ ಸಂಗ್ರಹಿಸಲಾಯಿತು. ಬಳಿಕ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ತೆಗೆದು ಹೂಳಲಾಯಿತು.
ಈ ವೇಳೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್, ಮೊಳೆಯೂರು, ಐನೂರು ಮಾರಿಗುಡಿ ವಲಯ ಅರಣ್ಯಾಧಿಕಾರಿ ಅಮೃತಾಮಾಯಪ್ಪನವರ್, ಪುನೀತ್‍ಕುಮಾರ್, ಎನ್‍ಟಿಸಿಎ ಪ್ರತಿನಿಧಿ ರಘುರಾಂ, ಇಲಾಖಾ ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹಾಜರಿದ್ದರು ಎಂದು ಹೆಡಿಯಾಲ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಮಾಹಿತಿ ನೀಡಿದ್ದಾರೆ.