Advertisement

ಕಾರ್ಕಳ: ಬಂಡಿಮಠ ಬಸ್‌ ನಿಲ್ದಾಣಕ್ಕೆ ಬಂತು ಬೆಳಕು!

02:24 AM Apr 03, 2021 | Team Udayavani |

ಕಾರ್ಕಳ: ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲಲ್ಲಿ ಮುಳುಗಿದ್ದ ಕಾರ್ಕಳ ಬಂಡಿಮಠ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಕು ಮೂಡಿದೆ.

Advertisement

ನೂತನ ಬಸ್‌ ನಿಲ್ದಾಣದಲ್ಲಿ ಈ ಹಿಂದೆ ಅಳವಡಿಸಿದ್ದ ಹೈಮಾಸ್ಟ್‌ ದೀಪಗಳು ಕೆಟ್ಟು ಹೋಗಿದ್ದವು. ಈಗ ಅವುಗಳನ್ನು ದುರಸ್ತಿ ಪಡಿಸಲಾಗಿದೆ.

ಬಂಡಿಮಠ ಬಸ್‌ನಿಲ್ದಾಣವನ್ನು ಕೋಟ್ಯಂತರ ವೆಚ್ಚ ಮಾಡಿ ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಬೆಳಕಿನ ವ್ಯವಸ್ಥೆಗೆಂದು ಅಳವಡಿಸಲಾಗಿದ್ದ ಬಸ್‌ ನಿಲ್ದಾಣದ ಹೈಮಾಸ್ಟ್‌ ದೀಪ ಕೆಟ್ಟು ಹೋಗಿ ಅದೆಷ್ಟೋ ಸಮಯಗಳಾಗಿತ್ತು. ಇದರಿಂದ ನಿಲ್ದಾಣ ಹಾಗೂ ಆಸುಪಾಸು ಕತ್ತಲಿನಲ್ಲಿ ಮುಳುಗಿತ್ತು.

ಸೂಕ್ತ ಬೆಳಕು ಇಲ್ಲದಿದ್ದುದ ರಿಂದ ಮಹಿಳೆಯರು, ಮಕ್ಕಳು, ವೃದ್ಧರು ರಾತ್ರಿ ವೇಳೆ ಬಸ್‌ ನಿಲ್ದಾಣದಲ್ಲಿ ಬಸ್ಸಿಗೆ ಕಾಯಲು ಕಷ್ಟ ಪಡುತ್ತಿದ್ದರು. ಕೆಲವೊಮ್ಮೆ ಬಸ್‌ ತಡವಾದ ವೇಳೆ ಕತ್ತಲಲ್ಲೇ ಕಾಲ ಕಳೆಯುವ ಸ್ಥಿತಿಯಿತ್ತು.

ಪುಂಡರ ಹಾವಳಿ
ಬೆಳಕಿಲ್ಲದ ನಿಲ್ದಾಣದಲ್ಲಿ ಕುಡುಕರ ಹಾವಳಿ ಸಹಿತ ಕೆಲವೊಂದು ಚಟುವಟಿಕೆಗಳು ನಡೆಯುತ್ತಿತ್ತು. ಕತ್ತಲಲ್ಲಿ ಮದ್ಯ ಸೇವನೆ ಮಾಡಿ ಸುತ್ತಾಡುವುದು. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ- ಸಿಗರೇಟು ಸೇದುವುದು. ತಂಬಾಕು ಉತ್ಪನ್ನಗಳಲ್ಲಿ ಜಗಿದು ಅಲ್ಲಲ್ಲಿ ಉಗುಳುವುದು ಹೀಗೆ ನಾನಾ ಚಟುವಟಿಕೆಗಳಿಂದ ಬಸ್‌ನಿಲ್ದಾಣ ಪುಂಡರ ಚಟುವಟಿಕೆಯ ಕೇಂದ್ರವಾಗಿ ಮಾರ್ಪಾಡಾಗಿತ್ತು. ಹೆಣ್ಣು ಮಕ್ಕಳು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ನಿಲ್ದಾಣದ ಕಡೆ ತೆರಳು ಭಯ ಪಡುವ ವಾತಾವರಣವಿತ್ತು. ಸುರಕ್ಷತೆಗೂ ಹಿನ್ನಡೆಯಾಗಿತ್ತು.

Advertisement

ದೀಪದ ಬೆಳಕಿಲ್ಲದ ಕಾರಣ ಬಸ್‌ನಿಲ್ದಾಣ ಪರಿಸರ ಸ್ವತ್ಛತೆ ಕೊರತೆಯನ್ನು ಎದುರಿಸುತ್ತಿತ್ತು. ಖಾಲಿ ಮದ್ಯದ ಬಾಟಲಿ ಎಸೆಯುವುದು ಇತ್ಯಾದಿಗಳು ಕತ್ತಲು ಆವರಿಸುವ ಸಮಯದಲ್ಲಿ ನಡೆಯುವುದರಿಂದ ಪತ್ತೆ ಕಾರ್ಯಕ್ಕೂ ಅಡಚಣೆಯಾಗುತ್ತಿತ್ತು.
ಹೈಮಾಸ್ಟ್‌ ದೀಪದ ಕಂಬದ ಕೆಟ್ಟು ಹೋದ ಬಲ್ಬ್ ಗಳಿರುವ ಯುನಿಟ್‌ ಅನ್ನು ಕಂಬದ ಕೆಳಭಾಗದವರೆಗೆ ಇಳಿಸಿ ದುರಸ್ತಿಗೆಂದು ಇರಿಸಿದ್ದು ತುಂಬಾ ಸಮಯಗಳಿಂದ ಹಾಗೆಯೇ ಇತ್ತು. ದುರಸ್ತಿಪಡಿಸಿ ಮೇಲೇರಿಸುವ ಕೆಲಸ ನಡೆದಿರಲಿಲ್ಲ.

ಕೇಬಲ್‌ ಈಗ ದುರಸ್ತಿಯೂ ಆಗಿದ್ದು ಬೆಳಕಿನ ಸಮಸ್ಯೆ ಬಗೆಹರಿದಿದೆ. ಎ. 1ರಂದು ರಾತ್ರಿ ಬಸ್‌ನಿಲ್ದಾಣದ ಹೈಮಾಸ್ಟ್‌ ದೀಪಗಳು ಉರಿಯಲಾರಂಭಿಸಿದ್ದು, ಬಸ್‌ನಿಲ್ದಾಣದ ಕತ್ತಲ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ. ಬಂಡಿಮಠ ಬಸ್‌ ನಿಲ್ದಾಣಕ್ಕೆ ದಿನವೊಂದಕ್ಕೆ 150ಕ್ಕೂ ಅಧಿಕ ಬಸ್‌ಗಳು ಬಂದುಹೋಗುತ್ತಿವೆ. ತಾಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿ ಈ ಬಸ್‌ ನಿಲ್ದಾಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next