Advertisement

ಬಂದಾನವಾಜ್‌ ವಿವಿಗೆ ಹಸಿರು ನಿಶಾನೆ

11:23 AM Aug 31, 2018 | |

ಕಲಬುರಗಿ: ಶೈಕ್ಷಣಿಕವಾಗಿ ಬೆಳೆಯುತ್ತಿರುವ ಹೈದ್ರಾಬಾದ ಕರ್ನಾಟಕದ ಕೇಂದ್ರ ಭಾಗ ಕಲಬುರಗಿ ಜಿಲ್ಲೆಗೆ ಮತ್ತೂಂದು
ವಿಶ್ವವಿದ್ಯಾಲಯದ ಗರಿ ಮುಕುಟಕ್ಕೇರಿದೆ. ಪ್ರತಿಷ್ಠಿತ ಖಾಜಾ ಶಿಕ್ಷಣ ಸಂಸ್ಥೆಗೆ 2018ರ ಕರ್ನಾಟಕ ಅಧಿನಿಯಮದ ಅಡಿ ಕರ್ನಾಟಕ ಸರ್ಕಾರ ಖಾಜಾ ಬಂದಾನವಾಜ್‌ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದೆ.

Advertisement

ಕಲಬುರಗಿಯಲ್ಲಿ ಈಗಾಗಲೇ ಗುಲ್ಬರ್ಗ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಶರಣಬಸವ
ವಿಶ್ವವಿದ್ಯಾಲಯ, ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ನಡುವೆ ಖಾಜಾ ಬಂದಾನವಾಜ್‌ ಐದನೇ ವಿಶ್ವ ವಿದ್ಯಾಲಯವಾಗಿ ಹೊರ ಹೊಮ್ಮಿದೆ.
 
ಈಗಾಗಲೇ ಖಾಜಾ ಶಿಕ್ಷಣ ಸಂಸ್ಥೆಯಡಿ 24 ವಿವಿಧ ಶಾಲೆ-ಕಾಲೇಜುಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ.
ಈಗ ಸಂಸ್ಥೆಗೆ ವಿವಿ ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಪ್ರಸಕ್ತ ವರ್ಷದಿಂದಲೇ ವಿವಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವಿ ಕುಲಾಧಿಪತಿ ಡಾ| ಸೈಯದ್‌ ಶಾ ಖುಸ್ರೋ ಹುಸೇನ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಗೆ ವಿವಿ ಕಾರ್ಯಾರಂಭಗೊಳಿಸಲು ಸರ್ಕಾರ ತನ್ನ ಒಪ್ಪಿಗೆ ನೀಡಿರುವುದಕ್ಕೆ ಹಾಗೂ ಇದಕ್ಕೆ ಬೆಂಬಲಿಸಿದ ಹೈಕ ಭಾಗದ ಜನಪ್ರತಿನಿಧಿಗಳಿಗೆ ಅಭಿನಂದನೆ ತಿಳಿಸಿದ ಡಾ| ಖುಸ್ರೋ, ಪ್ರಸಕ್ತ ವರ್ಷ ಎರಡು ಸ್ನಾತಕೋತ್ತರ ಪದವಿ
ಕೋರ್ಸ್‌ಗಳ ಜತೆಗೆ ಇತರ ವೈದ್ಯಕೀಯ ಡಿಪ್ಲೋಮಾ ಕೋರ್ಸುಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೇ
ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಖಜಾ ಬಂದಾನವಾಜ್‌ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಕರ್ನಾಟಕ ಕೇಂದ್ರೀ ವಿಶ್ವವಿದ್ಯಾಲಯ,
ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಹಲವಾರು ವಿವಿಗಳ ಕುಲಪತಿಗಳಾಗಿ ಕಾರ್ಯನಿರ್ವಹಿಸಿರುವ ಪ್ರೊ| ಎ.ಎಂ.
ಪಠಾಣ ಅವರನ್ನು ನೇಮಿಸಲಾಗಿದೆ. ಅದೇ ರೀತಿ ಸೈಯದ್‌ ಮುಹಮ್ಮದ ಅಲಿ ಅಲ್‌ ಹುಸೇನಿ ಹಾಗೂ ಡಾ| ಎಚ್‌.ಎಂ.
ವಿರೂಪಾಕ್ಷಯ್ಯ ಅವರನ್ನು ಕುಲಸಚಿವರನ್ನಾಗಿ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಉದ್ಯೋಗ ಆಧಾರಿತ ಕೋರ್ಸುಗಳಿಗೆ ಆದ್ಯತೆ: ಕುಲಪತಿ ಪ್ರೊ| ಅಬ್ದುಲ್‌ ಜಲೀಲ್‌ ಖಾನ್‌ ಎಂ. ಪಠಾಣ ಮಾತನಾಡಿ,
ವಿವಿಯಲ್ಲಿ ಉದ್ಯೋಗ ಆಧಾರಿತ ಕೋರ್ಸುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ವಿವಿಯಲ್ಲಿ ಶಿಕ್ಷಣ
ಪಡೆಯುತ್ತಿದ್ಧಂತೆ ಉದ್ಯೋಗ ದೊರೆಯಬೇಕು. ಆ ನಿಟ್ಟಿನ ಕೋರ್ಸುಗಳ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ.

Advertisement

ಪ್ಯಾರಾ ಮೆಡಿಕಲ್‌, ಇಂಜಿನಿಯರಿಂಗ್‌ ಡಿಪ್ಲೋಮಾ ಹಾಗೂ ಇತರ ಕೋರ್ಸುಗಳ ಕುರಿತು ಒಲವು ಹೊಂದಲಾಗಿದೆ ಎಂದು ತಿಳಿಸಿದರು. ಆ. 23ರಂದು ಖಾಜಾ ಬಂದಾನವಾಜ್‌ ವಿವಿ ಆಸ್ತಿತ್ವಕ್ಕೆ ಬಂದಿದ್ದು, ಇದಕ್ಕಿಂತ ಮುಂಚೆ ತಮ್ಮ ಖಾಜಾ ಶಿಕ್ಷಣ ಸಂಸ್ಥೆ ಅಡಿಯ ವೈದ್ಯಕೀಯ, ಇಂಜಿನಿಯರಿಂಗ್‌, ಕಾನೂನು ಸೇರಿದಂತೆ ಇತರ ಕೋರ್ಸುಗಳಲ್ಲಿ ಪ್ರವೇಶಾತಿ ಪಡೆದವರು ತಮ್ಮ ಪದವಿ ಮುಗಿಸುವವರೆಗೂ ಆಯಾ ವಿವಿಗಳ ವ್ಯಾಪ್ತಿಗೆ ಬರಲಿದ್ದಾರೆ. ತದನಂತರ ಪ್ರವೇಶಾತಿ ಪಡೆದವರೆಲ್ಲರೂ ಖಾಜಾ ಬಂದಾನವಾಜ್‌ ವಿವಿ ವ್ಯಾಪ್ತಿಗೆ ಬರುತ್ತಾರೆ. ವಿವಿ ಶೈಕ್ಷಣಿಕ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕೇಂದ್ರ ಧನ ಸಹಾಯ ಆಯೋಗದ ನಿಯಮದಂತೆ ವಿವಿಯ ಎಲ್ಲ ವಿಭಾಗಗಳನ್ನು, ಕೋರ್ಸುಗಳನ್ನು ತೆರೆಯಲಾಗುವುದು ಎಂದು ವಿವರಿಸಿದರು. ಕುಲಸಚಿವರಾದ ಸೈಯದ್‌ ಮುಹಮ್ಮದ ಅಲಿ ಅಲ್‌ ಹುಸೇನಿ ಹಾಗೂ ಡಾ| ಎಚ್‌.ಎಂ. ವಿರೂಪಾಕ್ಷಯ್ಯ ಹಾಜರಿದ್ದರು

ಖಾಜಾ ಬಂದಾನವಾಜ್‌ ವಿವಿಯಲ್ಲಿ ಶೈಕ್ಷಣಿಕ ಗುಣಮಟ್ಟತೆಗೆ ಮೊದಲ ಆದ್ಯತೆ ನೀಡಲಾಗುವುದು. ವಿವಿಯಲ್ಲಿನ ಪ್ರಾಧ್ಯಾಪಕ ಹಾಗೂ ಇತರ ಹುದ್ದೆಗಳನ್ನು ಸಂವಿಧಾನದ 371ನೇ (ಜೆ) ವಿಧಿ ಅಡಿ ಭರ್ತಿ ಮಾಡಿಕೊಳ್ಳಲಾಗುವುದು. ವಿವಿ ಶೈಕ್ಷಣಿಕ ಸುಧಾರಣೆ ನಿಟ್ಟಿನಲ್ಲಿ ವಿವಿ ಸಲಹಾ ಸಮಿತಿಯೊಂದನ್ನು ರಚಿಸಲಾಗಿದೆ.
ಡಾ| ಸೈಯದ್‌ ಶಾ ಖುಸ್ರೋ ಹುಸೇನ್‌, ಕುಲಾಧಿಪತಿಗಳು 

ಖಾಜಾ ಬಂದಾನವಾಜ್‌ ವಿವಿ, ಕಲಬುರಗಿ ಖಾಜಾ ಬಂದಾನವಾಜ್‌ ವಿವಿ ಸಂಪೂರ್ಣ ಕಾಗದ ರಹಿತವಾಗಿದ್ದು, ಸಂಪೂರ್ಣ ಗಣಕೀಕೃತ ಆಗಿರಲಿದೆ. ಒಟ್ಟಾರೆ ವಿವಿ ಶೈಕ್ಷಣಿಕ ಗುಣಮಟ್ಟ ಹಾಗೂ ಹೊಸ ಕೋರ್ಸುಗಳ ಜತೆಗೆ ವಿದೇಶಿ ಪ್ರಸಿದ್ಧ ಕಂಪನಿ ಹಾಗೂ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಸಂಸ್ಥೆಯ 37 ಎಕರೆ ಭೂಮಿಯಲ್ಲಿ ವಿವಿಯ ಎಲ್ಲ ಕಾರ್ಯಚಟುವಟಿಕೆಗಳು ನಡೆಯಲಿದೆ.
ಪ್ರೊ| ಎ.ಎಂ. ಪಠಾಣ, ಕುಲಪತಿಗಳು, ಖಾಜಾ ಬಂದಾನವಾಜ್‌ ವಿವಿ 

Advertisement

Udayavani is now on Telegram. Click here to join our channel and stay updated with the latest news.

Next