ಬೆಂಗಳೂರು:”ಬಂದ್ ಆಚರಣೆ’ ಅಸಂವಿಧಾನಿಕ ಎಂದು ಪುನರುತ್ಛರಿಸಿರುವ ಹೈಕೋರ್ಟ್, ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದೆ.
ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ನೀಡಿದ್ದ ಬಂದ್ ಕರೆ ಸೇರಿದಂತೆ ಕನ್ನಡ ವಾಟಾಳ್ ಪಕ್ಷ ಕರೆ ನೀಡುವ ಬಂದ್ ಆಚರಣೆಗೆ ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ನ್ಯಾಯಪೀಠ, ಬಂದ್‌ಗೆ ಸರ್ಕಾರವೇ ಪರೋಕ್ಷವಾಗಿ ಬೆಂಬಲ ನೀಡುತ್ತದೆ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಅವಕಾಶ ಮಾಡಿಕೊಡಬಾರದು. ಬಂದ್‌ಗೆ ಕರೆ ನೀಡುವವರು ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇರಬಾರದು. ಬಸ್ ಸೇವೆ ಸಂಚಾರ ಸ್ಥಗಿತ ಸೇರಿದಂತೆ ಯಾವುದೇ ಸಹಕಾರವಿರಬಾರದು. ಜತೆಗೆ ಸಾರ್ವಜನಿಕರ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಮೌಖೀಕ ಸಲಹೆ ನೀಡಿತು. ಒಂದು ವೇಳೆ ಬಂದ್ ನಡೆದರೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿತು.
ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಬಂದ್‌ಗೆ ಸರ್ಕಾರ ಯಾವುದೇ ರೀತಿಯ ಬೆಂಬಲವೂ ನೀಡುತ್ತಿಲ್ಲ. ಕೋರ್ಟ್ ಆದೇಶಕ್ಕೆ ಬದ್ಧವಾಗಿದೆ. ಬಂದ್ ನಡೆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಬಂದ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶವಿದೆ. ಈ ಕೋರ್ಟ್ ಕೂಡ ಆದೇಶ ನೀಡಿದ್ದು, ಈ ಆದೇಶ ಜಾರಿಗೊಳಿಸಬೇಕು. ಅರ್ಜಿದಾರರು ಎತ್ತಿರುವ ಇನ್ನಿತರೆ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಲಿಖೀತ ರೂಪದ ಆಕ್ಷೇಪಣೆಗಳನ್ನು ಸಲ್ಲಿಸಿದ ಬಳಿಕ ಸುದೀರ್ಘ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ ಏಪ್ರಿಲ್ 26ಕ್ಕೆ ವಿಚಾರಣೆ ಮುಂದೂಡಿತು.