Advertisement

ಪ್ರತಿಭಟನೆಗೆ ಸೀಮಿತವಾಯ್ತು ಬಂದ್‌

03:11 PM Feb 14, 2020 | Suhan S |

ಬಾಗಲಕೋಟೆ: ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಡಾ| ಸರೋಜಿನಿ ಮಹಿಷಿ ವರದಿ ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ ಬೆಂಬಲಿಸಿ, ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ

Advertisement

ಭವನಕ್ಕೆ ಆಗಮಿಸಿ, ಕೆಲಹೊತ್ತು ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧಮಂತಿ ಮಾತನಾಡಿ, ಸರೋಜಿನಿ ಮಹಿಷಿ ಲೇಖಕಿ, ರಾಜಕಾರಣಿ, ಕಾನೂನು ತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆಯಾಗಿದ್ದರು. ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದ ಅವರು, 2 ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿ ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದರು. ರೈಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ ಇಂದಿಗೂ ಜಾರಿಗೊಂಡಿಲ್ಲ ಎಂದರು.

ದಿ| ರಾಮಕೃಷ್ಣ ಹೆಗಡೆ 1983ರಲ್ಲಿ ಸಿಎಂ ಆಗಿದ್ದಾಗ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಸರಕಾರ, ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶ ಪರಿಶೀಲಿಸಿ ವಿಮರ್ಶಿಸಲು ಸರೋಜಿನಿ ಮಹಿಷಿ ಅವರಿಗೆ ಕೇಳಿಕೊಂಡಿತ್ತು. ರಾಜ್ಯದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂದು ತಮ್ಮ ವರದಿ ಮೂಲಕ ಪ್ರತಿಪಾದಿಸಿದ್ದರು. ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ ಮಾಡಿ ಕನ್ನಡಿಗರಿಗೆ ಅನ್ಯಾಯ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಭಾಷಿಕರ ನಿರಂತರ ವಲಸೆಯಿಂದ ರಾಜ್ಯದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ದಿನಗಳು ದೂರವಿಲ್ಲ. ಅದೇ ರೀತಿ ಸಕಲ ಸಮೃದ್ಧಿ ಹೊಂದಿರುವ ಕರ್ನಾಟಕದಲ್ಲಿ ಕನ್ನಡದ ವಿದ್ಯಾವಂತ ಯುವಜನತೆ ನಿರುದ್ಯೋಗಿಗಳಾದರೆ, ಕೆಲವು ಜನ ಪರರಾಜ್ಯಗಳಿಗೆ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವ ಪರದಾಟದಲ್ಲಿದ್ದಾರೆ. ಕನ್ನಡಿಗರ ಅಭ್ಯುದಯಕ್ಕಾಗಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಕರವೇ ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಪ್ರಮುಖರಾದ ಸಂಗಮೇಶಅಂಬಿಗೇರ, ಆಕಾಶ ಆಸಂಗಿ, ಮಂಜು ಪವಾರ, ರುದ್ರಪ್ಪ ಭೂಷನ್ನವರ, ಪ್ರವೀಣ ಪಾಟೀಲ, ಸಂತೋಷ ಬಾಜಟ್ಟಿ, ಸಚಿನ ಪಟ್ಟಣಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next