ಬೀದರ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಪ್ರತಿಭಟನೆ ಕೇವಲ ಎರಡು ಗಂಟೆಗೆ ಸೀಮಿತವಾಗಿತ್ತು.
ಬೆಳಗ್ಗೆ ಪ್ರತಿದಿನದಂತೆ ಜನಜೀವನ ಆರಂಭವಾಗಿತ್ತು. ಬಸ್ ಸಂಚಾರ ಕೂಡ ಶುರುವಾಗಿತ್ತು. ಆದರೆ 9 ಗಂಟೆ ನಂತರ ವಿವಿಧ ಸಂಘಟನೆಗಳ ಮುಖಂಡರು ನಗರ ಕೇಂದ್ರ ಉಪನಿಲ್ದಾಣಕ್ಕೆ ತೆರಳಿ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಎರಡು ಗಂಟೆಗೂ ಅಧಿಕ ಸಮಯ ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್ ಆಗಿತ್ತು. ಬಂದ್ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ನಿಮಿತ್ತ ಯಾವುದೇ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಕಂಡು ಬರಲಿಲ್ಲ.
ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಡೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಜಾಗೃತಾ ಕ್ರಮವಾಗಿ ಎಲ್ಲಾ ಬಸ್ ನಿಲ್ದಾಣಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮಚ್ಚದೇ ತೆರೆದೇ ಇದ್ದವು. ಬೀದಿ ವ್ಯಾಪಾರಿಗಳು ಕೂಡ ಎಂದಿನಂತೆ ವ್ಯಾಪಾರ ನಡೆಸಿದ್ದರಿಂದ ಭಾರತ್ ಬಂದ್ ಜಿಲ್ಲೆಯಲ್ಲಿ ಯಶಸ್ವಿಯಾಗಲಿಲ್ಲ.
ಸಿಐಟಿಯು, ಎಐಟಿಯುಸಿ, ಎಸ್‌ಎಫ್‌ಐ, ಆಶಾ, ಸಿಐಟಿಯು ಸೇರಿದಂತೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚು ಹಣ ವಸೂಲಿ: ಕೆಲ ಗಂಟೆ ಕಾಲ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖಾಸಗಿ ವಾಹನದವರು ಗ್ರಾಹಕರಿಂದ ಹೆಚ್ಚು ಹಣ ಸುಲಿಗೆ ಮಾಡಿದ್ದಾರೆ. ಬೀದರ್ ಹುಮನಾವಾದ ಮಧ್ಯದಲ್ಲಿ 55 ರೂ. ದರ ಇದ್ದು, ಖಾಸಗಿ ವಾಹನಗಳು ರೂ. 80ರಿಂದ 100 ವರೆಗೆ ವಸೂಲಿ ಮಾಡಿರುವ ಕುರಿತು ತಿಳಿದು ಬಂದಿದೆ.