ಕೊಪ್ಪಳ: ಸಂವಿಧಾನ ಸಂರಕ್ಷಣಾ ಸಮಿತಿಯು ಕರೆ ನೀಡಿರುವ ಕೊಪ್ಪಳ ಬಂದ್ ಕರೆಗೆ ಸೋಮವಾರ (ಜ.06) ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ತಿನಲ್ಲಿ ಹಗುರವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ದಲಿತ ಪರ ಸಂಘಟನೆಗಳು ಸೇರಿದಂತೆ ಕೊಪ್ಪಳದ 30ಕ್ಕೂ ಹೆಚ್ಚು ಸಂಘಟನೆಗಳು ಕೊಪ್ಪಳ ಬಂದ್ ಕರೆಗೆ ಬೆಂಬಲ ಸೂಚಿಸಿದ್ದು ಸೋಮವಾರ ಕೊಪ್ಪಳದ ಎಲ್ಲ ಅಂಗಡಿ ಮುಂಗಟ್ಟು ಬಂದ್ ಆಗಿವೆ.
ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬೈಕ್ ರ್ಯಾಲಿ ಹಾಗೂ ಆಟೋ ರ್ಯಾಲಿ ಆರಂಭ ಮಾಡಲಾಗಿದೆ. ಸಾರಿಗೆ ಸಂಚಾರ ಸೇರಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಮುಂದಾದ ಹೋರಾಟಗಾರರಿಗೆ ಪೊಲೀಸರು ತಡೆ ನೀಡಿದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದವು.
ಕೊಪ್ಪಳದಲ್ಲಿ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಶಾಲಾ ಕಾಲೇಜುಗಳು ಕೆಲವು ಸ್ಥಳದಲ್ಲಿ ಬಂದ್ ಆಗಿವೆ. ಅಗತ್ಯ ಔಷಧಿ, ಆಸ್ಪತ್ರೆಗಳು ತೆರೆದಿವೆ.