Advertisement

ಯತ್ನಾಳ್ ಹೇಳಿಕೆಗೆ ಬಣಜಿಗರ ಖಂಡನೆ

07:21 PM Mar 16, 2021 | Team Udayavani |

ತಾಳಿಕೋಟೆ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕೆಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಾಡುತ್ತಿರುವ ಹೋರಾಟಕ್ಕೆ ನಮ್ಮ ತಕರಾರು ಇಲ್ಲ. ಮೀಸಲಾತಿ ಕೇಳುವ ಭರದಲ್ಲಿ ಬಣಜಿಗ ಸಮಾಜದ ಬಗ್ಗೆ ಅತ್ಯಂತ ವ್ಯಂಗ್ಯ ಮತ್ತು ದ್ವೇಷ ಭಾವನೆ ಕಾರುತ್ತಿರುವ ಯತ್ನಾಳ ಅವರ ಹೇಳಿಕೆಗಳು ಖಂಡನೀಯವಾಗಿವೆ ಎಂದು ಬಣಜಿಗ ಸಮಾಜದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಎ. ಕಸ್ತೂರಿ ಹೇಳಿದರು.

Advertisement

ಶಾಸಕ ಯತ್ನಾಳ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸೋಮವಾರ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿ ಅವರು ಮಾತನಾಡಿದರು. ಬಣಜಿಗ ಸಮಾಜದ ಬಗ್ಗೆ ಯತ್ನಾಳ ಅವರು ಕಾರುತ್ತಿರುವ ದ್ವೇಷ ಏತಕ್ಕಾಗಿ ಮತ್ತು ಬಣಜಿಗ ಸಮಾಜದಿಂದ ಅವರಿಗೆ ಏನಾದರೂ ಅನ್ಯಾಯವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಣಜಿಗ ಸಮಾಜದವರಿಗೆ ಹಿಂದುಳಿದ ವರ್ಗದಲ್ಲಿ ಮೀಸಲಾತಿ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೇನೂ ಕಲ್ಪಿಸಿಕೊಟ್ಟಿಲ್ಲ.

1976ರಲ್ಲಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಲಕ್ಷ್ಮಣ ಹಾವನೂರ ಅವರು ಕಲ್ಪಿಸಿಕೊಟ್ಟಿದ್ದಾರೆ. ಯತ್ನಾಳ ಅವರು ಒಮ್ಮೆ ಆಯೋಗದ ವರ ದಿಯನ್ನು ಅಧ್ಯಯನ ಮಾಡಲಿ. 2013ರಲ್ಲಿ ಬಣಜಿಗ ಸಮಾಜದ ಮುಖಂಡರುಗಳು ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರಿಗೆ ಮೀಸಲಾತಿ ಪ್ರಮಾಣ ಪತ್ರ ಸಿಗದಿರುವ ಕುರಿತು ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ ಶೆಟ್ಟರ ಅವರು ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಮೀಸಲಾತಿ ಪ್ರಮಾಣ ಪತ್ರ ಕೊಡಲೇ ಬೇಕೆಂದು ಎಲ್ಲಿಯೂ ಕೂಡಾ ಆದೇಶ ಮಾಡಿಲ್ಲ.

ಅಂತಹ ಆದೇಶವಿದ್ದರೆ ಸಾರ್ವತ್ರಿಕ ಬಹಿರಂಗಗೊಳಿಸಲಿ ಎಂದರು. ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ರಮೇಶ ಸಾಲಂಕಿ, ಮುರುಗೇಶ ಕಡಕೋಳ, ಪ್ರಭು ಕತ್ತಿ, ಎಂ.ಎಸ್‌. ಸರಶೆಟ್ಟಿ, ಗುರುಸಂಗಪ್ಪ ಜಮ್ಮಲದಿನ್ನಿ, ಮಹಾಂತೇಶ ಬಳಗಾನೂರ, ಸತೀಶ ಸರಶೆಟ್ಟಿ, ಶೇಖಪ್ಪ ಪಟ್ಟಣಶೆಟ್ಟಿ, ಮಲ್ಲು ಸರಶೆಟ್ಟಿ, ಮಹೇಶ ಸರಶೆಟ್ಟಿ, ಸುಭಾಷ್‌ ಕಾಜಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next