ಬನವಾಸಿ (ಶಿರಸಿ): ಕಂದಬೋತ್ಸವ ಅಂಗವಾಗಿ ಇಲ್ಲಿನ ಬನವಾಸಿ ಮೈದಾನದಲ್ಲಿ ಫಲ-ಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ಬಿಸಿಲ ಬೇಗೆ ಮಧ್ಯೆಯೂ ವೈವಿಧ್ಯಮಯ ಪುಷ್ಪಗಳು ಅರಳಿ ನಿಂತು ಆಸಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಪುಷ್ಪ ಕೃಷಿ ಉತ್ತೇಜಿಸುವ ಆಶಯದೊಂದಿಗೆ ತೋಟಗಾರಿಕೆ ಇಲಾಖೆ ಹಮ್ಮಿಕೊಂಡ ಫಲ-ಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ವಿವಿಧ ಕಲಾಕೃತಿ ಸಿದ್ಧಗೊಂಡಿದ್ದು ನೋಡುಗರ ಮನ ಮುದಗೊಳಿಸುತ್ತಿವೆ.
ಬನವಾಸಿಯ ಅಧಿದೇವ ಶ್ರೀ ಮಧುಕೇಶ್ವರ ಸೇರಿದಂತೆ ವಿವಿಧ ಆಕೃತಿಗಳನ್ನು ಪುಷ್ಪದಲ್ಲೇ ಸಿದ್ಧಗೊಳಿಸಲಾಗಿತ್ತು. ಐದು ಬಣ್ಣಕ್ಕೂ ಅಧಿಕ ಸಾವಿರಾರು ಸೇವಂತಿಗೆ, ನಾಲ್ಕು ಬಣ್ಣದ ಗುಲಾಬಿಗಳು, ಜರಬೇರಾ, ಆರ್ಕಿಡ್, ಗ್ಲಾಡಿಯೋಲಸ್ ಡೈಸಿಯ
ಪುಷ್ಪಗಳನ್ನು ಚಿಕ್ಕಬಳ್ಳಾಪುರದ ರೈತರ ಹೊಲಗಳಿಂದ, ಬೆಂಗಳೂರಿನಿಂದ ನೇರ ಖರೀದಿಸಿ ತಂದು ಇಲ್ಲಿ ಚೆಂದದಿಂದ ಜೋಡಿಸಲಾಗಿದೆ.
40 ಸಾವಿರಕ್ಕೂ ಅಧಿಕ ತರಾವರಿ ಪುಷ್ಪಗಳು, ಐದು ಸಾವಿರಕ್ಕೂ ಅಧಿಕ ಮಾರಿಗೋಲ್ಡ, ಜಿನಿಯಾ, ಬಸ್ಲಾಂ ಸೇರಿದಂತೆ 20 ಕ್ಕೂ ಅಧಿಕ ಹೂವುಗಳು ಕುಂಡಗಳಲ್ಲಿ ಗಮನ ಸೆಳೆದವು. ಹೂವಗಳು ವಿವಿಧ ರೂಪ ತಳೆದು ಜನರನ್ನು ಆಕರ್ಷಿಸಿದವು. ಗಿರೀಶ ಶಿವಮೊಗ್ಗ ಅವರ ಕಲ್ಲಂಗಡಿಯ ಆಕರ್ಷಕ ಕೆತ್ತನೆಗಳು, ಚಂದ್ರಯಾನ, ಬನವಾಸಿ ಮಧುಕೇಶ್ವರ ದೇವರು ಪುಷ್ಪಗಳಲ್ಲೇ ಅರಳಿದ್ದು ಗಮನ ಸೆಳೆದವು.
ಚಂದ್ರಯಾನಕ್ಕೆ 20 ಸಾವಿರ, ಮಧುಕೇಶ್ವರ ದೇವರ ಕಲಾಕೃತಿಯನ್ನು 8 ಸಾವಿರ ಹೂವುಗಳಿಂದ ಅರಳಿಸಲಾಗಿದೆ. ಸತೀಶ ಹೆಗಡೆ, ರವಿ ಹೆಗಡೆ ಅವರ ತಂಡದಿಂದ ಬಗೆ ಬಗೆಯ ಪುಷ್ಪ ಜೋಡಣೆ ಪ್ರದರ್ಶನದ ಸೌಂದರ್ಯ ಹೆಚ್ಚಿಸಿದ್ದವು. ಹೂವಿನಿಂದ ಅಣಬೆ, ಸೆಲ್ಪಿ ಪಾಯಿಂಟ್ ಇನ್ನಷ್ಟು ವೈವಿಧ್ಯತೆಗೆ ಸಾಕ್ಷಿಯಾಗಿದ್ದವು. ಸಿತಾರಾಮ ಹೆಗಡೆಯವರ ವೆಜಿಟೇಬಲ್ ರಂಗೋಲಿ ಪೂರ್ಣಿಮಾ ಶೆಟ್ಟಿ ಬಿಡಿಸಿದ್ದ ಪುಷ್ಪ ರಂಗೋಲಿ ಆಕರ್ಷಿಕವಾಗಿದ್ದವು.
ತೆಂಗು, ಬಾಳೆ, ಅನಾನಸ್, ಅಡಿಕೆ, ವಿವಿಧ ತರಕಾರಿಗಳು, ಲಾವಂಚ, ಜೇನಿನ ವಿವಿಧತೆಗಳು ಇಲ್ಲಿ ಅನಾವರಣಗೊಂಡವು. ತೋಟಗಾರಿಕಾ ಅಧಿಕಾರಿಗಳಾದ ಬಿ.ಪಿ.ಸತೀಶ, ಸತೀಶ ಹೆಗಡೆ, ಗಣೇಶ ಹೆಗಡೆ, ಇತರ ಅ ಧಿಕಾರಿಗಳು, ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಸಹಕಾರ ನೀಡಿದರು.