Advertisement

ಬನವಾಸಿ ನೆನಪು

01:39 PM Jun 22, 2021 | Team Udayavani |

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುತ್ತಾರೆ ಹಿರಿಯರು. ಅದರಂತೆ ಪ್ರವಾಸದ ಅನುಭವ ಮರೆಯಲಾರದಂತಹ ನೆನಪುಗಳನ್ನು ನೀಡುತ್ತದೆ. ನನ್ನೂರು ಮಲೆನಾಡಿನ ಶಿರಸಿ. ನನ್ನ ಮೊದಲ ಪ್ರವಾಸ ಬನವಾಸಿಗೆ ಹೊದದ್ದು. ಆಗಿನ್ನು ನನಗೆ ಚಿಕ್ಕ ವಯಸ್ಸು. ಬನವಾಸಿ ಆದಿಕವಿ ಪಂಪನು ಮರು ಜನ್ಮವೆಂಬುದಿರೆ ಮರಿದುಂಬಿಯಾಗಿಯಾದರೂ ಬನವಾಸಿ ದೇಶದೊಳು ಹುಟ್ಟಬೇಕು ಎಂದು ಆಸೆಪಟ್ಟ ಊರು. ಶಿರಸಿಯಿಂದ 23 ಕಿ.ಮೀ ದೂರದಲ್ಲಿರುವ ಪ್ರದೇಶ. ಇದು ಕದಂಬರ ರಾಜಧಾನಿಯಾಗಿತ್ತು. ಹಿಂದೆ ಜಯಂತಿಪುರ, ವೈಜಯಂತಿ ಎಂಬ ಹೆಸರು ಪಡೆದಿತ್ತು. ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳವಾಗಿದೆ.

Advertisement

ಬೆಳಿಗ್ಗೆ 9 ರಿಂದ 11 ಮತ್ತೆ 3ರಿಂದ 5ರ ಅವಧಿಯಲ್ಲಿ ಶಾಲೆಯಲ್ಲಿ ಪುಟ್ಟ ಪುಟ್ಟ ಗೆಳೆಯರೊಂದಿಗೆ ಆಟವಾಡಿ ನಲಿದಾಡಿ ಅ,ಆ,ಇ, ಈ ಕಲಿತು, ಕಥೆ ಕೇಳಿ, ಬರುತ್ತಿದ್ದ ನಮಗೆ ಪ್ರವಾಸದ ದಿನ ಬೆಳಿಗ್ಗೆಯೇ ಎದ್ದು ತಯಾರಾಗಿ ಬರಲು ಹೇಳಿದ್ದರು. ಮುಂಜಾನೆ ಏಳಲು ಕಷ್ಟವಾದರೂ ಪ್ರವಾಸಕ್ಕೆ ಹೋಗುವ ಹುಮ್ಮಸ್ಸಿನಲ್ಲಿ ಬೇಗನೆ ಎದ್ದು. ಅಮ್ಮ ಕೊಟ್ಟ ತಿಂಡಿ, ಹಾಲು ಕುಡಿಯಲು ದಿನಾಲೂ ರಂಪಾಟ ಮಾಡುವ ನಾನು, ಆ ದಿನ ಬೇಗನೆ ಎದ್ದು 8 ಗಂಟೆಗೆ ಶಾಲೆಯ ಬಳಿ ಹಾಜರಿದ್ದೆ. ಅಮ್ಮ ಕಟ್ಟಿಕೊಟ್ಟ ತಿಂಡಿ, ಜೋಪಾನವಾಗಿಟ್ಟುಕೊಂಡು ವಾಹನವನ್ನು ಏರಿದೆವು. ಅಲ್ಲಿಂದ ಸಾಗಿದ ಪ್ರಯಾಣ ಎಷ್ಟು ಮಜವಾಗಿತ್ತೆಂದರೆ ದೇವಾಲಯ ಬಂದದ್ದೆ ಅರಿವಿಗೆ ಬರಲಿಲ್ಲ.

ವಾಹನದಿಂದ ಇಳಿದು ಎಲ್ಲರೂ ದೇವಾಲಯದ ಮುಂದೆ ಚಪ್ಪಲಿ ಕಳಚಿಟ್ಟು, ಆವರಣ ಪ್ರವೇಶ ಮಾಡಿದೆವು. ವಿಶಾಲವಾದ ಆವರಣದಲ್ಲಿ  ಎರಡು ಬೃಹತ್‌ ಕಂಬಗಳು. ದೇವಾಲಯದ ಒಳ ಪ್ರವೇಶಿಸುತ್ತಿದ್ದಂತೆ, ನಮಗಿಂತ ಬಹು ದೊಡ್ಡ ಆನೆ ಗಾತ್ರದ ನಂದಿ ವಿಗ್ರಹ. ನಮಗೆಲ್ಲ ನಂದಿಯನ್ನು ನೋಡಿ ಭಯವೂ, ಖುಷಿಯೂ ಒಟ್ಟಿಗೆ ಆಯಿತು. ನಮ್ಮ ಟೀಚರ್‌ ನಮಗೆ ಅದರ ಮಹತ್ವಗಳನ್ನು ತಿಳಿಸಿಕೊಟ್ಟರು. ಗರ್ಭ ಗುಡಿಯ ಪ್ರವೇಶದ್ವಾರದ ಬಲಭಾಗದಲ್ಲಿ ಸುಂದರವಾದ ಒಂದು ಕಲ್ಲಿನ ಮಂಟಪವಿದ್ದು ಅದರ ಒಳಗೆ ಶಿವ ಹಾಗೂ ಪಾರ್ವತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಆ ಮಂಟಪದಲ್ಲಿ ಸ್ವರ್ಗ, ಭೂಮಿ, ಪಾತಾಳ ಲೋಕಗಳನ್ನು ಕೆತ್ತಲಾಗಿದೆ. ಎರಡು ದೇವಾಲಯಗಳ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿದೆವು.

Advertisement

ದೇವಸ್ಥಾನದ ಸುತ್ತಿನಲ್ಲಿ ಬಳಪದ ಕಲ್ಲಿನಿಂದ ಮಾಡಿದ ಮಂಚವೊಂದನ್ನು ಕಂಡು, ಸುತ್ತಲೂ ಇರುವ ಹಲವಾರು ಮೂರ್ತಿಗಳನ್ನು (ಸುಮಾರಷ್ಟು ಭಗ್ನಗೊಂಡಿವೆ)ನೋಡುತ್ತಾ, ದೇವಾಲಯದ ಪಕ್ಕದಲ್ಲಿರುವ ಸಣ್ಣ ಕೋಣೆಯಲ್ಲಿ, ನಾವು ತಂದ ತಿನಿಸು ತಿಂದೆವು.  ಅನಂತರ ವರದಾ ನದಿಯತ್ತ ಸಾಗಿದೆವು. ಈ ನದಿಯ ಸುತ್ತ ನಡೆದು, ಅದರ ವಿಹಂಗಮ ನೋಟ ಸವಿದು, ದೇವಾಲಯದ ಸುತ್ತ ಇನ್ನೊಮ್ಮೆ ತಿರುಗಾಡಿದೆವು.ಅಷ್ಟರಲ್ಲಿ ನಮಗೆ ಊಟ ಸಿದ್ಧವಿತ್ತು. ಊಟ ಮಾಡಿ, ಸಂಜೆ 5 ಗಂಟೆಗೆ ಮನೆಗೆ ಬಂದು ತಲುಪಿದ ನಾನು ಮನೆಯವರಿಗೆ ನನಗೆ ತಿಳಿದ ಎಲ್ಲವನ್ನೂ ಹೇಳಿದ್ದೆ. ಕೆಲವನ್ನು ಮರೆತು ನೆನಪಿರುವಷ್ಟನ್ನು ಒಪ್ಪಿಸಿದ್ದೆ. ಅದಾದ ಮೇಲೆ ನಾನು ಅದೆಷ್ಟೋ ಬಾರಿ ಅದೇ ಜಾಗಗಳಿಗೆ ಹೋಗಿ ಬಂದಿದ್ದೇನೆ. ಆದರೆ ಮೊದಲ ಅನುಭವ ಇನ್ನೂ ಮಾಸಿಲ್ಲ.

 

ಸಾವಿತ್ರಿ ಶ್ಯಾನುಭಾಗ

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next