ಬನವಾಸಿ(ಶಿರಸಿ, ಉತ್ತರ ಕನ್ನಡ): ಕದಂಬರು ಆಳಿದ ಬನವಾಸಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆಸಲಾಗುವ ಕದಂಭೋತ್ಸವಕ್ಕೆ ಮುನ್ನುಡಿಯಾಗಿ ನಡೆದ ಸಾಂಸ್ಕೃತಿಕ ಕಲಾ ನಡಿಗೆ ಜನರ ಉತ್ಸಾಹದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಸಂಭ್ರಮದಲ್ಲಿ ಆಕರ್ಷಕವಾಗಿ ನಡೆಯಿತು.
ನಾಡಿನ ಪ್ರಸಿದ್ಧ ಶ್ರೀ ಮಧುಕೇಶ್ವರ ದೇವರ ದೇವಾಲಯದ ಎದುರಿನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಉತ್ಸವ ನಡೆಯುವ ಸುಮಾರು ಮೂರು ಕಿಮೀ ದುರದ ಮೈದಾನದವರೆಗೂ ಮೆರವಣಿಗೆ ಸಾಗಿತು. ೬೩ ಕಲಾ ತಂಡಗಳು ಕಲಾ ಮೆರಗು ನೀಡಿದವು. ದೇವಾಲಯದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಬನವಾಸಿಯ ಮಯೂರವರ್ಮ ಕದಂಬ ವೃತ್ತದ ತನಕ ಸಾಗಿ ಮೈದಾನಕ್ಕೆ ನಡೆಯಿತು.
ಬಂಟ್ವಾಳ ಚಿಲಿಪಿಲಿ ಕಲಾ ತಂಡ, ಹುಬ್ಬಳ್ಳಿಯ ಜಗ್ಗಲಿಕೆ ತಂಡ, ಬಾದಾಮಿಯ ಮಹಿಳಾ ಡೊಳ್ಳು ತಂಡ, ಚಿಕ್ಕಮಂಗಳೂರಿನ ವೀರಗಾಸೆ, ದಾವಣಗೆರೆಯ ನಂದಿಧ್ವಜ ಹಾಗೂ ತಾಲೂಕಿನ ೮ ಕಲಾತಂಡಗಳು ತಂಡಗಳು ಆಕರ್ಷಣೆ ಹೆಚ್ಚಿಸಿದವು.
ಇದಕ್ಕೂ ಮುನ್ನ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಗಂಗೈಬಾಯಿ ಮಾನಕರ್ ಕದಂಬ ಜ್ಯೋತಿ ವಾಹನಕ್ಕೆ ಪೂಜಿಸಿ, ನಂತರ ಕದಂಬ ಲಾಂಛನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಅಪರ ಪ್ರಕಾಶ ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಈಶ್ವರ ಕಾಂದೂ, ಎಸಿ ಅಪರ್ಣಾ ರಮೇಶ, ತಹಸೀಲ್ದಾರ ಶ್ರೀಧರ ಮುಂದಲಮನಿ, ಡಿಡಿಪಿಐ ಬಸವರಾಜ್ ಪಿ, ಇಓ ಸತೀಶ ಹೆಗಡೆ, ಬಿಇಓ ನಾಗರಾಜ್ ನಾಯ್ಕ ಇತರರು ಇದ್ದರು.
ಮಂಗಳವಾರ ಸಂಜೆ 6 ಕ್ಕೆ ಕದಂಬೋತ್ಸವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ.
– ರಾಘವೇಂದ್ರ ಬೆಟ್ಟಕೊಪ್ಪ