ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ, ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ರಾಜ್ಯ ಸರ್ಕಾರ ಆ ರೀತಿಯ ಪ್ರಸ್ತಾವವನ್ನು ಕೈ ಬಿಡ ಬೇಕೆಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವಾರು ವರ್ಷಗಳಿಂದ ಬನವಾಸಿಯ ಜನರು ವ್ಯಾಪಾರ ವಹಿವಾಟು, ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರವಾಗಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ಬೆಸೆದುಕೊಂಡಿದ್ದಾರೆ.
ಅಲ್ಲದೇ ಇಲ್ಲಿಯ ಮಧುಕೇಶ್ವರ ದೇವಾಲಯ ಜಿಲ್ಲೆಗೆ ಕಳಶ ಪ್ರಾಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ಸಂಘ, ಸಂಸ್ಥೆಗಳು “ಬನವಾಸಿ ಉಳಿಸಿ’ ಹೋರಾಟ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಬನವಾಸಿ ಯನ್ನು ಜಿಲ್ಲೆಯಲ್ಲಿಯೇ ಉಳಿಸಬೇಕು. ಇಲ್ಲದಿದ್ದರೆ ಸರ್ಕಾರದ ನಿರ್ಧಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಿರ್ಮಲಾ ಸೀತಾರಾಮನ್‌ಗೆ ಪತ್ರ: ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಾಲ ಮರುಪಾವತಿ ಅವಧಿಯನ್ನು 15 ವರ್ಷಗಳಿಗೆ ವಿಸ್ತರಿಸುವಂತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಆರ್ಥಿಕ ಹಿಂಜರಿತದಿಂದ ಸಂಕಷ್ಟ ಎದುರಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈಗಾಗಲೇ ಪಡೆದಿರುವ ಸಾಲ ಹಾಗೂ ಹೊಸ ಸಾಲವನ್ನು ಮರು ಪಾವತಿಸಲು 15 ವರ್ಷಗಳ ಕಾಲಾ ವಕಾಶ ನೀಡಬೇಕು.
ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಜಮೀನು, ಕಟ್ಟಡಗಳನ್ನು ಮೌಲ್ಯಮಾಪನ ಮಾಡಿ, ಅದನ್ನೂ ಮೂಲ ಬಂಡವಾಳವನ್ನಾಗಿ ಪರಿಗಣಿಸಿ ಸಾಲ ನೀಡ ಬೇಕು. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಯಂತ್ರಗಳನ್ನೂ ಪ್ರತ್ಯೇಕಿಸಿ ಬಂಡವಾಳವ ನ್ನಾಗಿ ಪರಿಗಣಿಸಿ ಸಾಲ ನೀಡಬೇಕೆಂದು ಮನವಿ ಮಾಡಿದ್ದಾರೆ.