Advertisement

ವೈಭವದ ಬನಶಂಕರಿದೇವಿ ರಥೋತ್ಸವ

12:08 PM Jan 11, 2020 | Suhan S |

ಬಾದಾಮಿ: ಉತ್ತರ ಕರ್ನಾಟದಕ ಪ್ರಸಿದ್ಧ ಬಾದಾಮಿಯ ಬನಶಂಕರಿದೇವಿ ಜಾತ್ರೆ ನಿಮಿತ್ತ ಮಹಾ ರಥೋತ್ಸವ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Advertisement

ಶುಕ್ರವಾರ ಬೆಳಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಬನಶಂಕರಿ ಮಹಾ ರಥೋತ್ಸವಕ್ಕೆ ಸಾಂಪ್ರದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ ನೆರವೇರಿತು. ಗದಗ ಜಿಲ್ಲೆಯ ಮಾಡಲಗೇರಿಯಿಂದ ವಿಶೇಷ ಅಲಂಕೃತ ಎತ್ತಿನ ಬಂಡಿಯಲ್ಲಿ ತಂದ ಹಗ್ಗಕ್ಕೆ ಬನಶಂಕರಿ ದೇವಿ ದೇವಸ್ಥಾನ ದಲ್ಲಿ ಬನಶಂಕರಿ ದೇವಸ್ಥಾನ ಟ್ರಸ್ಟ ಕಮಿಟಿ ಚೇರಮನ್‌ ಮಲ್ಲಾರಭಟ್‌ ಪೂಜಾರಿ ಹಾಗೂ ಹಲವು ಅರ್ಚಕರು ಪೂಜೆ ಸಲ್ಲಿಸಿದರು. ಸದಸ್ಯರಾದ ಪ್ರಕಾಶ ಪೂಜಾರ, ನಾಗೇಶ ಪೂಜಾರ, ಶಾಮ್‌ ಪೂಜಾರ, ಶ್ರೀನಿವಾಸ ಪೂಜಾರ, ಕಿರಣ ಪೂಜಾರ, ಮಹೇಶ ಪೂಜಾರ, ಅಪ್ಪಣ್ಣ ಪೂಜಾರ, ಸುರೇಶ ಪೂಜಾರ ಪಾಲ್ಗೊಂಡಿದ್ದರು.

ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಥಕ್ಕೆ ನಮಸ್ಕರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ಬನಶಂಕರಿ ದೇವಸ್ಥಾನ ಆವರಣದಲ್ಲಿ ಸುಮಾರು 300 ಮೀಟರ್‌ಗೂ ಹೆಚ್ಚು ದೂರದವರೆಗೆ ಸಾಗಿತು. ಈ ವೇಳೆ ಸೇರಿದ್ದ ಲಕ್ಷಾಂತರ ಭಕ್ತರು ಬಾಳೆಹಣ್ಣು, ಉತ್ತತ್ತಿ, ಬಾರೆಹಣ್ಣು, ಲಿಂಬೆಹಣ್ಣು, ಚುರಮುರಿ ಎಸೆದು ಭಕ್ತಿ ಸಮರ್ಪಿಸಿದರು. ರಥ ಸಾಗುತ್ತಿದ್ದಂತೆ ಭಕ್ತರು ಬನಶಂಕರಿದೇವಿ ನಿನ್ನ ಪಾದಕೆ ಶಂಭು ಕೋ…ಎಂಬ ಘೋಷಣೆ ಕೂಗಿದರು. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಮಹಾರಥೋತ್ಸವದಲ್ಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ಎಸ್‌.ಜಿ. ನಂಜಯ್ಯನಮಠ, ಮುಖಂಡರಾದ ಹೊಳೆಬಸು ಶೆಟ್ಟರ, ಮಹೇಶ ಹೊಸಗೌಡರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಮಾರಗೌಡಜನಾಲಿ, ಮುಚಖಂಡಯ್ಯ ಹಂಗರಗಿ, ರವೀಂದ್ರ ಕಲಬುರ್ಗಿ, ಮಹಾಂತೇಶ ಮಮ ದಾಪುರ, ಕುಮಾರ ರೋಣದ, ಎಂ.ಎಚ್‌. ಚಲವಾದಿ ಮತ್ತಿತರರು ರಥಕ್ಕೆ ಹಣ್ಣು-ಕಾಯಿ-ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ಡಿಸಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಜಿಪಂ ಸಿಇಒ ಗಂಗೂಬಾಯಿ, ತರಬೇತಿ ಐಎಎಸ್‌ ಅಧಿಕಾರಿ ಗರೀಮಾ ಪನ್ವಾರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ್‌ ಎಸ್‌.ಎಸ್‌. ಇಂಗಳೆ, ತಾಪಂ ಇಒ ಡಾ| ಪುನೀತ್‌ ಬಿ.ಆರ್‌, ಪಿಡಿಒ ವಿಜಯ ಕೋತಿನ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

ಬಂದೋಬಸ್ತ್: ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ಬಾಗಲಕೋಟೆಯಿಂದ ಆಗಮಿಸಿದ್ದ ಪೊಲೀಸ್‌ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next