ಮಡಿಕೇರಿ: ದೇವಸ್ಥಾನದ ಪ್ರಭಾವಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದೇವಣಗೇರಿ ಗ್ರಾಮದ ಬಾಳಕೇರಿ ಕಾಲನಿಯ ನವೀನ (ಅಪ್ಪುಣ್ಣಿ) ಎಂಬಾತನೇ ಬಂಧಿತ ಆರೋಪಿ. ರೂ. 15,000 ಮೌಲ್ಯದ ಪಂಚಲೋಹದ ಪ್ರಭಾವಳಿಯನ್ನು ಪೊಲೀ ಸರು ವಶಪಡಿಸಿಕೊಂಡಿದ್ದಾರೆ.
ಬಾಳೆಲೆಯ ಗಣಪತಿ ದೇವಸ್ಥಾನದ ಗಣಪತಿ ವಿಗ್ರಹದ ಮೇಲೆ ಅಳವಡಿಸಲಾಗಿದ್ದ ಪಂಚ ಲೋಹದ ಪ್ರಭಾವಳಿ ಆ. 7ರಂದು ಕಳ್ಳತನವಾಗಿತ್ತು.
ಆರೋಪಿ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಒಂದು ದೇವಸ್ಥಾನ ಹಾಗೂ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಎರಡು ದೇವಸ್ಥಾನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರಪ್ರಸಾದ್ ಅವರ ಮಾರ್ಗ ದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು, ವೀರಾಜಪೇಟೆ ಉಪ ವಿಭಾಗದ ಪೋಲಿಸ್ ಉಪಾಧೀಕ್ಷಕ ನಾಗಪ್ಪ, ಪೊನ್ನಂಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಎಂ.ಟಿ. ರಮೇಶ್, ಎಚ್.ವೈ. ಚಂದ್ರು, ಎನ್.ಎಂ. ಚಿಟ್ಟಿಯಪ್ಪ ಹಾಗೂ ಸಿಬಂದಿಗಳಾದ ಬಿ.ವಿ. ಪ್ರವೀಣ್, ಕೃಷ್ಣ, ಮಹಮದ್ ಅಲಿ, ಹರೀಶ್, ಅಬ್ದುಲ್ ಮಜೀದ್, ಎ.ಟಿ. ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ದೇವಸ್ಥಾನಗಳ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಎಲ್ಲ ದೇವಸ್ಥಾನಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸುವಂತೆ ಎಸ್‌ಪಿ ರಾಜೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.