Advertisement

ಬೆಲೆ ಕುಸಿತ |ಬಾಳೆ ಗೊನೆ ತಿಪ್ಪೆಗೆಸೆದ ರೈತ

07:10 PM Sep 26, 2021 | Team Udayavani |

ವರದಿ: ಮಂಜುನಾಥ ಎಚ್‌. ಕುಂಬಳೂರ

Advertisement

ರಾಣಿಬೆನ್ನೂರ: ತಾಲೂಕಿನ ಮಾಕನೂರ ಗ್ರಾಮದ ರೈತ ಶಿವನಗೌಡ ನಾಗಪ್ಪ ಮುದಿಗೌಡ್ರ ತನ್ನ 3 ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದು, ಫಸಲು ಉತ್ತಮವಾಗಿ ಬಂದಿದೆ. ಆದರೆ, ಬೆಲೆ ಕುಸಿತಗೊಂಡು ಕೇಳುವವರಿಲ್ಲದಂತಾಗಿದೆ. ಹಾಗಾಗಿ, ಎಲ್ಲ ಬಾಳೆ ಗೊನೆಗಳನ್ನು ತಿಪ್ಪೆಗೆ ಹಾಕಿ ಹಸಿರು ಗೊಬ್ಬರ ತಯಾರಿಸಲು ಮುಂದಾಗಿದ್ದಾರೆ.

ಬಾಳೆ ಸಸಿ ನಾಟಿ ಮಾಡುವುದರಿಂದ ಹಿಡಿದು ಗೊಬ್ಬರ, ಕ್ರಿಮಿನಾಶಕ, ಕೊಯ್ಲು, ಕೂಲಿ ಆಳಿನ ಖರ್ಚು ಸೇರಿ 1ಲಕ್ಷಕ್ಕೂ ಅ ಧಿಕ ಹಣ ಖರ್ಚು ತಗುಲುತ್ತಿದೆ. ಪ್ರಸ್ತುತ ಬೆಲೆ ಕುಸಿದ ಕಾರಣ ಕೆಜಿಗೆ 3 ರೂ. ಇದೆ. ಅದನ್ನು ವ್ಯಾಪಾರಸ್ಥರು ಕೇಳುತ್ತಿಲ್ಲ. ಇದರಿಂದ ಅಸಹಾಯಕನಾಗಿದ್ದೇನೆ. ಒಂದು ಎಕರೆಗೆ 25 ಟನ್‌ ಬಂದರೂ 75 ಸಾವಿರ ರೂ. ಆಗುತ್ತದೆ. ಅದಕ್ಕೂ ಬೇಡಿಕೆ ಇಲ್ಲ. ಮಾಡಿದ ಖರ್ಚಿಗಿಂತ ಆದಾಯ ಕಡಿಮೆಯಾಗುವುದರಿಂದ ವ್ಯರ್ಥ ಶ್ರಮ ಹಾಕುವುದು ಬೇಡ ಎಂದು ಭಾವಿಸಿ ಎಲ್ಲ ಬಾಳೆ ಗೊನೆಗಳನ್ನು ತಿಪ್ಪೆಗೆ ಹಾಕಲು ಮುಂದಾಗಿದ್ದೇನೆ ಎಂದು ರೈತ ಶಿವನಗೌಡ “ಉದಯವಾಣಿ’ ತಿಳಿಸಿದರು.

ರೈತರ ಬದುಕು ಒಂದಿಲ್ಲೊಂದು ಸಂಕಷ್ಟದಲ್ಲಿ ಸಿಲುಕಿ ಬೆಂಡಾಗುತ್ತಲೇ ಇದೆ. ಕೊರೊನಾ ಮಹಾಮಾರಿ ರೈತರ ಬದುಕಿನಲ್ಲಿ ಕರಿನೆರಳು ಬೀರಿದರೆ, ಅತಿವೃಷ್ಟಿ ಅಥವಾ ಅನಾವೃಷ್ಟಿ, ಉತ್ತಮವಾಗಿ ಬಂದ ಫಸಲಿಗೆ ಬೆಲೆ ಸಿಗದೆ ಮಾಡಿದ ಖರ್ಚು ಕೂಡ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮೆಟ್ಟಿ ನಿಲ್ಲಲು ರೈತರು ವೈಜ್ಞಾನಿಕ ಕೃಷಿಯತ್ತ ಸಾಗಬೇಕಿದೆ.

ರೈತ ತನ್ನ ಒಟ್ಟು ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ. ಜೋಳ, ರಾಗಿ, ನವಣಿ, ತೊಗರಿ, ಹೆಸರು, ಹಲಸಂದಿ, ಹತ್ತಿ, ತರಕಾರಿ ಬೆಳೆಗಳು ಸೇರಿದಂತೆ ಎಲ್ಲ ವಿಧದ ಬೆಳೆಗಳನ್ನು ಬೆಳೆದಲ್ಲಿ ಇವುಗಳಲ್ಲಿ ಕೆಲವು ಬೆಳೆಗಳಿಗೆ ಬೆಲೆ ಕುಸಿಯಬಹುದು. ಆದರೆ ಎಲ್ಲ ಬೆಳೆಗಳಿಗೂ ಬೆಲೆ ಕುಸಿಯಲು ಸಾಧ್ಯವಿಲ್ಲ. ಒಬ್ಬ ರೈತ ಒಂದೇ ಬೆಳೆಗೆ ತನ್ನ ಎಲ್ಲ ಜಮೀನನ್ನು ಉಪಯೋಗಿಸಿದಲ್ಲಿ ಈ ವೇಳೆ ಬೆಲೆ ಕುಸಿದರೆ ದಿಕ್ಕು ತೋಚದಂತಾಗಿ ಮಂಕಾಗುತ್ತಾನೆ. ಇದಕ್ಕೆ ಉದಾಹರಣೆಗೆ ರಾಣಿಬೆನ್ನೂರ ತಾಲೂಕಿನ ಮಾಕನೂರ ಗ್ರಾಮದ ರೈತನ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಿ ಅಂದಾಜು 3 ಲಕ್ಷ ರೂ. ಮೌಲ್ಯದ ಸುಮಾರು 2.25 ಟನ್‌ ಬಾಳೆ ನಷ್ಟವಾಗಿ ಸಂಕಷ್ಟ ಎದುರಿಸುವಂತಾಗಿದೆ.

Advertisement

ಇತ್ತ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತನ ಬಾಳೆ ತೋಟಕ್ಕೆ ಭೇಟಿ ನೀಡಿ ರೈತನ ಸಂಕಷ್ಟಕ್ಕೆ ನೆರವಾಗುವರೋ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next