Advertisement
ಒಂದು ಕಡೆ ಬರಗಾಲ, ಇನ್ನೊಂದು ಕಡೆ ನೀರಿನ ತೇವಾಂಶ ಕಡಿಮೆಯಾಗಿ ಒಣಗಿದ ಬೆಳೆಗಳು, ಬತ್ತಿದ ನದಿ… ಇಂಥ ಸಂದಿಗ್ಧ ಸ್ಥಿತಿಯಲ್ಲಿ ರೈತರೊಬ್ಬರು ಕೊಳವೆ ಬಾವಿ ಮತ್ತು ನೈಸರ್ಗಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು 2 ಎಕರೆಯಲ್ಲಿ ಸಮೃದ್ಧವಾಗಿ ಬಾಳೆ ಬೆಳೆದಿದ್ದಾರೆ. ಅವರೇ, ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿಂಚಗೇರಿ ಗ್ರಾಮದವರಾದ ಕಲ್ಲಪ್ಪ ಈರಪ್ಪ ಮೇತ್ರಿ.
ಸಾವಯುವ ಕೃಷಿ ಪದ್ಧತಿಯಲ್ಲಿ ಬಾಳೆ ಸಸಿ ನಾಟಿ ಮಾಡಲು ಗುಂಡಿ ತೆಗೆಸಿ, ಪ್ರತಿ ಗುಂಡಿಗೆ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿಸಿದರು. ಒಂದು ಸಸಿಗೆ 14 ರೂ. ನಂತೆ 2500 ಸಸಿಗಳನ್ನು ತಂದು ನಾಟಿ ಮಾಡಿದರು. ನಾಟಿ ಮಾಡಿದಾಗ ಆಗಸ್ಟ್ ತಿಂಗಳು. ಮುಂದೆ ಮೂರು ತಿಂಗಳಿಗೊಮ್ಮೆ ಸಸಿ ಬುಡಕ್ಕೆ ಒಂದು ಬುಟ್ಟಿ ಮೇಲ್ಗೊಬ್ಬರ ಪೂರೈಸಿದರು. ವಾರಕ್ಕೆ ಒಂದು ಬಾರಿಯಂತೆ ಪ್ರತಿ ಬಾಳೆ ಗಿಡಕ್ಕೆ ನೀರು ಒದಗಿಸಿದರು.
ನಾಟಿ ಮಾಡಿದ್ದ 2500 ಸಸಿಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಗಿಡಗಳು ಉತ್ತಮ ಗೊನೆ ಬಿಟ್ಟಿವೆ. ಒಂದು ಬಾಳೆ ಗೊನೆ 10ರಿಂದ 13 ಹಣಿಗೆಗಳನ್ನು ಹಾಕಿದ್ದು ಸುಮಾರು 25ರಿಂದ 30 ಕೆಜಿಯಷ್ಟು ತೂಗುತ್ತವೆ.
Related Articles
ಆರಂಭದಲ್ಲಿ ಗುಂಡಿ ತೋಡಿ ಗೊಬ್ಬರ ಹಾಕಲು, ಸಸಿ ಖರೀದಿ… ಹೀಗೆ ಎಲ್ಲ ಸೇರಿ ಎರಡು ಎಕರೆಗೆ 1.50 ರಿಂದ 2 ಲಕ್ಷ ರೂ ಖರ್ಚಾಗಿದೆ. ಸದ್ಯ ಕಟಾವಿಗೆ ಬಂದಿರುವ ಬಾಳೆ, ಈಗಿರುವ ಮಾರುಕಟ್ಟೆಯ ಬೆಲೆಯಂತೆ ಕೆ.ಜಿಗೆ 10 ರೂಪಾಯಿಂತೆ ಒಂದು ಗಿಡ 25 ಕೆ.ಜಿ ಬರುತ್ತದೆ. ಹಾಗಾಗಿ ಒಂದು ಬಾಳೆ ಗಿಡಕ್ಕೆ 250 ರೂ. ಬೆಲೆ ಸಿಗುತ್ತದೆ. ಅಂದರೆ 2000 ಬಾಳೆ ಗಿಡಗಳಿಗೆ ಒಟ್ಟು 5 ಲಕ್ಷ ಬೆಲೆ ದೊರೆಯುತ್ತದೆ. ಇದರಲ್ಲಿ ರೈತನಿಗೆ ಸುಮಾರು 2 ರಿಂದ 3 ಲಕ್ಷ ಲಾಭಾಂಶ ದೊರಕುವುದು. ಇದು ಮೊದಲನೇ ಬೆಳೆಯಾಗಿದ್ದು, ಎರಡನೆಯ ಬೆಳೆಗೆ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ ಕಲ್ಲಪ್ಪನವರು.
Advertisement
ನಾನು ಈ ಹಿಂದೆ, ಕೇವಲ ತೊಗರಿ ಮತ್ತು ಕಬ್ಬು ಬೆಳೆಯುತ್ತಿದ್ದೆ. ಇದರಿಂದ ಹೆಚ್ಚೇನೂ ಲಾಭ ಆಗುತ್ತಿರಲಿಲ್ಲ, ಹಾಗಾಗಿ ಬಾಳೆ ನೆಡಲು ನಿರ್ಧರಿಸಿದೆ. ಕೊಳವೆ ಬಾವಿ ನೀರು ಸಾಕಷ್ಟು ಸಿಕ್ಕಿದ್ದರಿಂದಾಗಿ ಬೆಳೆ ಸಮೃದ್ಧವಾಗಿ ಬಂದಿದೆ.– ಕಲ್ಲಪ್ಪ ಮೇತ್ರಿ, ರೈತ – ಮಲ್ಲಿಕಾರ್ಜುನ, ಹಿಂಚಗೇರಿ