Advertisement

ಆರೋಗ್ಯ ಸ್ನೇಹಿ ಬಾಳೆದಿಂಡಿನ ಪಾಕ ವೈವಿಧ್ಯ

07:40 PM Jan 16, 2020 | Sriram |

ಬಾಳೆಗಿಡ ಎಲ್ಲರ ಮನೆಗಳಲ್ಲಿ ನಾವು ನೋಡಿರುವುದಿಲ್ಲ. ಕೆಲವು ಕ್ಷೇತ್ರ, ಮನೆಗಳಲ್ಲಿ ಬಾಳೆ ಗಿಡಗಳನ್ನು ಬೆಳೆಸುವುದರಿಂದ ಐಶ್ವರ್ಯವನ್ನು ತರಿಸಿಕೊಂಡಂತೆ. ಅದರಲ್ಲೂ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ತಪ್ಪದೇ ಬಾಳೆಗಿಡವನ್ನು ಬೆಳೆಸುತ್ತಿದ್ದರು.

Advertisement

ಬಾಳೆಗೆ ಒಂದೇ ಗೊನೆ ಆಡುವವರಿಗೆ ಒಂದೇ ಮಾತು ಎಂಬ ಗಾದೆ ಮಾತಿನಂತೆ ಬಾಳೆಯ ಎಲೆಗಳು, ಬಾಳೆ ಹಣ್ಣು, ಬಾಳೆ ಹೂವು, ಬಾಳೆ ಕಾಯಿ, ಅದರ ಕಾಂಡ, ಬಾಳೆಯ ದಿಂಡು ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಸಹ ಆರೋಗ್ಯಕ್ಕೆ ಒಳ್ಳೆಯದು.

ಅದರಲ್ಲೂ ಬಾಳೆದಿಂಡಿನ ಒಳಭಾಗವನ್ನು ವಿವಿಧ ರೀತಿಯ ಅಡುಗೆಯಲ್ಲಿ ಬಳಸಲಾಗುವುದು. ಬಾಳೆದಿಂಡಿನಲ್ಲಿ ನಾರಿನಂಶವಿರುವುದರಿಂದ ಇದು ಬಹಳ ಉತ್ತಮ. ಕಿಡ್ನಿಯಲ್ಲಿ ಕಲ್ಲು ಇದ್ದವರು ಇದರ ರಸವನ್ನು ಕುಡಿದರೆ ಕಲ್ಲು ಕರಗುತ್ತದೆ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳು ನಿವಾರಣೆಯಾಗುತ್ತದೆ. ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರ ಹಾಕಲು ಇದರ ರಸ ರಾಮಬಾಣ.

ಈ ಬಾಳೆದಿಂಡಿನಲ್ಲಿ ದೋಸೆ, ಪಲ್ಯ, ಗೊಜ್ಜು, ಚಟ್ನಿ ಮುಂತಾದ ರುಚಿಕರವಾದ ಅಡುಗೆಯನ್ನು ತಯಾರಿಸಬಹುದು.

ಬಾಳೆದಿಂಡಿನ ಜ್ಯೂಸ್
ಬೇಕಾಗುವ ಸಾಮಗ್ರಿಗಳು
ಬಾಳೆದಿಂಡು ಒಂದು ತುಂಡು, ಬೆಲ್ಲ, ಏಲಕ್ಕಿ ಪುಡಿ, ಜೇನು ತುಪ್ಪ ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲಿಗೆ ಬಾಳೆದಿಂಡನ್ನು ತೆಗೆದುಕೊಂಡು ತುಂಡು  ತುಂಡು ಮಾಡಿ. ತುಂಡು ಮಾಡುವಾಗಲೇ ಬೆರಳ ತುದಿಯಿಂದ ಅದರ ನಾರನ್ನು ಸುತ್ತಿ ಸುತ್ತಿ ತೆಗೆಯಿರಿ. ಬಳಿಕ ಆ ತುಂಡುಗಳಿಗೆ ಬೇಕಾಗಷ್ಟು ನೀರು ಸೇರಿಸಿ ಮಿಕ್ಸ್ ಗೆ ಹಾಕಿ ರುಬ್ಬಿ ನಂತರ ಅದನ್ನು ಸೋಸಿಕೊಂಡು ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ, ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.

Advertisement

ಬಾಳೆದಿಂಡಿನ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ 1/2 ಕೆ.ಜಿ, 1 ಕಪ್ ಸಣ್ಣಗೆ ಹೆಚ್ಚಿದ ಬಾಳೆದಿಂಡು, ಉದ್ದಿನ ಬೇಳೆ 1/4ಕೆ.ಜಿ., ತೆಂಗಿನ ತುರಿ 1ಕಪ್,ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ಪ್ರತ್ಯೇಕವಾಗಿ ನೆನೆಸಿ. ನೆನೆದ ಉದ್ದಿನ ಬೇಳೆಯನ್ನು ರುಬ್ಬಿರಿ. ನಂತರ ಅಕ್ಕಿಯನ್ನು ರುಬ್ಬಿ. ರುಬ್ಬುವಾಗ ಕೊನೆಯಲ್ಲಿ ಅದಕ್ಕೆ ಹೆಚ್ಚಿಟ್ಟ ಬಾಳೆದಿಂಡನ್ನು ಹಾಗೂ ತೆಂಗಿನ ತುರಿಯನ್ನು ಸೇರಿಸಿ ಮತ್ತೆ ಸುತ್ತು ತಿರುವಿ ತೆಗೆಯಿರಿ. ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿಡಿ. ಮರುದಿನ ದೋಸೆಯ ಕಾವಲಿಗೆ ಎಣ್ಣೆ ಹಾಕಿ ದೋಸೆ ಹುಯ್ಯಿರಿ..ನಂತರ ದೋಸೆ ಸವಿಯಲು ಸಿದ್ಧ. ಇದು ಕಾಯಿ ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಬಾಳೆದಿಂಡಿನ ಚಟ್ನಿ
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಬಾಳೆದಿಂಡಿನ ತುರಿ 1ಕಪ್, ತೆಂಗಿನ ತುರಿ 1ಕಪ್, ಸಣ್ಣ ತುಂಡು ಶುಂಠಿ, ಹಸಿಮೆಣಸು 2 ಈರುಳ್ಳಿ 1 ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಬಾಳೆದಿಂಡನ್ನು ತುಂಡು ಮಾಡಿ ನಾರನ್ನು ತೆಗೆದು ಹೆಚ್ಚಿಕೊಳ್ಳಿ. ಬಳಿಕ ಅದಕ್ಕೆ ತೆಂಗಿನ ತುರಿ, ಹಸಿಮೆಣಸು, ಶುಂಠಿ, ಈರುಳ್ಳಿ , ಉಪ್ಪು ಸೇರಿಸಿ ರುಬ್ಬಿರಿ. ಇದು ಊಟದ ಜೊತೆ ಸವಿಯಲು ರುಚಿಕರವಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next