ರಬಕವಿ-ಬನಹಟ್ಟಿ: ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ದರಗಳು ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಕಾಣುತ್ತಿವೆ. ತರಕಾರಿ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿನ ಅನುಕೂಲವಾದರೆ ಬಾಳೆ ಹಣ್ಣು ಬೆಳೆದ ರೈತರು ಮಾತ್ರ ತೀವ್ರ ಸಂಕಷ್ಟದಲ್ಲಿದ್ದಾರೆ.
ಬಾಳೆ ಹಣ್ಣುಗಳನ್ನು ರೈತರೆ ಕರೆದು ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಮಧ್ಯವರ್ತಿಗಳು ತೋಟಕ್ಕೆ ಬಂದು ಕೇವಲ ರೂ. 2 ಮಾತ್ರ ಒಂದು ಕೆ.ಜಿ.ಯಂತೆ ಬಾಳೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜಿ.9 ಬಾಳೆ ರೂ. 10 ಕ್ಕೆ ಒಂದು ಡಜನ್ ಮಾರಾಟವಾಗುತ್ತಿದೆ. ಇನ್ನೂ ಜವಾರಿ ಬಾಳೆ ಹಣ್ಣುಗಳ ಬೆಲೆಯೂ ತೀವ್ರವಾಗಿ ಕುಸಿತಗೊಂಡಿದೆ.
ಒಂದು ಕೆ.ಜಿ ಜವಾರಿ ಬಾಳೆ ಹಣ್ಣುಗಳು ರೂ. 25 ರಿಂದ 35 ಮಾರಾಟವಾಗುತ್ತಿದ್ದವು. ಅವು ಕೂಡಾ ಈಗ ಕೇವಲ ರೂ. 15 ರಿಂದ ರೂ. 20ಕ್ಕೆ ಮಾರಾಟವಾಗುತ್ತಿವೆ. ಕೆಲವು ಸಂದರ್ಭದಲ್ಲಿ ಕೆ.ಜಿಗೆ ರೂ. 42 ರವರೆಗೂ ಮಾರಾಟಗೊಂಡಿದ್ದ ಬಾಳೆ ಇದೀಗ ಸ್ಥಳೀಯ ಮಾರುಕಟ್ಟೆಯಲ್ಲಿ ಜವಾರಿ ಬಾಳೆ ಹಣ್ಣುಗಳು ರೂ. 15 ಕ್ಕೆ ಮಾರಾಟವಾಗುತ್ತಿವೆ. ಕೋವಿಡ್ ನಿಂದಾಗಿ ಮತ್ತೇ ಲಾಕ್‌ಡೌನ ಆದರೆ ಇಗಿರುವ ಬೆಲೆಯೂ ಬರುವುದಿಲ್ಲ. ಒಟ್ಟಾರೆ ಬಾಳೆ ಬೆಳೆದ ರೈತನ ಪರಸ್ಥಿತಿ ಹೇಳತೀರದಾಗಿದೆ.
ಇದನ್ನೂ ಓದಿ : ಕೋವಿಡ್ ಭಾರಿ ಏರಿಕೆ : ರಾಜ್ಯದಲ್ಲಿ ಇಂದು 21 ಸಾವಿರ ಕೇಸ್; 10 ಸಾವು
ಕೋವಿಡ್‌ನಿಂದಾಗಿ ಬೇರೆ ಕಡೆಗೆ ಇಲ್ಲಿಯ ಬಾಳೆ ಹಣ್ಣುಗಳು ಹೋಗುತ್ತಿಲ್ಲ. ಇನ್ನೂ ತಂಪು ವಾತಾವರಣ ಇರುವುದರಿಂದ ಬಾಳೆ ಹಣ್ಣುಗಳನ್ನು ತಿನ್ನುವವರ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಇನ್ನೂ ಬಾಳೆ ಹಣ್ಣು ತಿಂದರೆ ಶೀತ ಹೆಚ್ಚಾಗುತ್ತಿದೆ ಎಂದು ಜನರು ಖರೀದಿ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ರೈತ ಶಂಕ್ರೆಪ್ಪ ಕರಿಗೌಡರ ಒಂದು ಎಕರೆ ಜಿ. 9 ಬಾಳೆ ಹಣ್ಣು ಬೆಳೆಯಲು ರೂ. ಒಂದು ಲಕ್ಷದವರೆಗೆ ಖರ್ಚಾಗುತ್ತದೆ. ಆದರೆ ಈಗ ನಮಗೆ ಖರ್ಚು ಮಾಡಿದ ಅರ್ಧದಷ್ಟು ಹಣ ಕೂಡಾ ಬಂದಿಲ್ಲ. ಬಾಳೆ ಹಣ್ಣು ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತೋಟದಲ್ಲಿ ನೂರಾರು ಬಾಳೆ ಗಿಡಗಳು ಹಾಗೆ ಬಿದ್ದುಕೊಂಡಿವೆ. ಅಲ್ಲಿರುವ ಬಾಳೆ ಹಣ್ಣುಗಳನ್ನು ಗಿಡದಿಂದ ಬೇರ್ಪಡಿಸಿ ತರುವುದು ಕೂಡಾ ಬೇಡವಾಗಿದೆ ಎನ್ನುತ್ತಾರೆ. ನಮ್ಮಲ್ಲಿ ಬೆಳೆದ ಬಾಳೆ ಹಣ್ಣುಗಳನ್ನು ಈಗ ಗೊಬ್ಬರಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ರೈತ ಸದಾಶಿವ ಬಂಗಿ ತಿಳಿಸಿದರು.
ಈ ಭಾಗದಲ್ಲಿ ಬಾಳೆ ಬೆಳೆದ ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಮತ್ತು ಇಲ್ಲಿ ಸಂಸ್ಕರಣಾ ಘಟಕವನ್ನು ಆರಂಭಿಸಬೇಕು ಎಂದು ರೈತರಾದ ಗುರುಲಿಂಗಪ್ಪ ಚಿಂಚಲಿ, ಗಿರಮಲ್ಲಪ್ಪ ಹೊಸೂರ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
– ಕಿರಣ ಶ್ರೀಶೈಲ ಆಳಗಿ