Advertisement

ಸಂಸ್ಕೃತಿಯ ಸಂಕೇತ ಹೆಣ್ಣು ಮಕ್ಕಳ “ಗುಳ್ಳವನ”ಹಬ್ಬ

06:24 PM Jul 04, 2022 | Team Udayavani |

ರಬಕವಿ-ಬನಹಟ್ಟಿ : ಉತ್ತರ ಕರ್ನಾಟಕದಲ್ಲಿ ಬರುವ ಗ್ರಾಮೀಣ ಹಬ್ಬಗಳಲ್ಲಿ ವಿಶೇಷತೆ ಹಾಗೂ ವೈಶಿಷ್ಟತೆಯನ್ನು ಹೊಂದಿರುವ ಗುಳ್ಳವ್ವನ ಹಬ್ಬ ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ. ಸಂಸ್ಕೃತಿಯ ಸಂಕೇತವಾಗಿರುವ ಹಬ್ಬ. ಅದರಲ್ಲೂ ಹೆಣ್ಣು ಮಕ್ಕಳ ಅಚ್ಚು ಮೆಚ್ಚಿನ ಹಬ್ಬವಾಗಿದೆ.

Advertisement

ಆಷಾಡ ಮಾಸದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗುಳ್ಳವ್ವನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗುಳಕವ್ವ, ಗೋಲಕವ್ವ ಎಂಬ ವಿವಿಧ ಹೆಸರಿನಿಂದ ಕರೆಸಿಕೊಳ್ಳುವ ಗುಳ್ಳವ್ವ ಜನಪದರ ದೇವತೆಯಾಗಿದ್ದಾಳೆ.

ಮಣ್ಣಿನಿಂದ ಮಾಡುವ ಗುಳ್ಳವ ಭೂದೇವಿಯ ಅವತಾರವಿದ್ದಂತೆ, ಗ್ರಾಮೀಣ ಜನರ ಒಂದು ಅಪರೂಪದ ಹಬ್ಬವೆನಿಸಿರುವ ಗುಳ್ಳವ್ವ ಆಷಾಡದ ಮೊದಲನೆ ಮಂಗಳವಾರದಿಂದ ಸುಮಾರು ಒಂದು ತಿಂಗಳಕಾಲ (4 ವಾರ) ಪ್ರತಿ ಮಂಗಳವಾರ ಮಣ್ಣಿನಿಂದ ಮಾಡಿದ ಗುಳ್ಳವ್ವನ ತಂದು ಶೃಂಗಾರ ಮಾಡಿ ಪೂಜೆ ಮಾಡುತ್ತಾರೆ. ಅಂದು ಸಂಜೆ ಚಿಕ್ಕ ಮಕ್ಕಳು ಆರತಿ ತೆಗೆದುಕೊಂಡು ಮನೆ ಮನೆಗೆ ಹೋಗಿ ಗುಳ್ಳವನ ಹಾಡುಗಳನ್ನು ಹಾಡಿ ಆರತಿ ಎತ್ತುತ್ತಾರೆ. ಮರುದಿನ (ಬುಧವಾರ) ಮನೆಗಳಲ್ಲಿ ಹಲವಾರು ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿಕೊಂಡು ತೋಟ, ಉದ್ಯಾನವನ, ದೇವಸ್ಥಾನ, ನದಿ ಹಾಗೂ ಕೆರೆಯ ದಡಗಳಲ್ಲಿ ಹೋಗಿ ಊಟ ಮಾಡಿ ಸಂಜೆವರೆಗೆ ಹರಟೆ ಹೊಡೆದು ಕಾಲಕಳೆಯುವ ಸಂಪ್ರದಾಯ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.

1)         ಗುಳ್ಳವ್ವನ ಮಣ್ಣ ತರಲಿಲ್ಲ

ಗುಲಗಂಜಿ ಹಚ್ಚಿ ಆಡಲಿಲ್ಲ

Advertisement

ಸುಳ್ಳೆ ಬಂತವ್ವ ನಾಗರ ಪಂಚಮಿ

ರೊಟ್ಟಿಗಿಟ್ಟಿ ಮಾಡಿಕೊಂಡು

ಎತ್ತಿನ ಮ್ಯಾಲ ಹೇರಿಕೊಂಡು

ಅಣ್ಣ ಬಂದಾನವ್ವ ಕರಿಲಾಕ

2)         ಒಂದ ಯಳಿ ಬತ್ತಿ ಮಾಡಿ,

ಒಂದ ಸೇರ ಎಣ್ಣಿ ತಂದು

ಕಲ್ಲಗಡ್ಯಾಗ ಕಲ್ಲಪೇಟ್ಯಾಗ

ರಾಜಗರ‍್ಯಾಗ ರಾಜಪೇಟ್ಯಾಗ

ಕಂಡಿರಿ ಗುಳ್ಳವ್ವನ ಐಶರ‍್ಯ

3)         ಒಂದ ಹುಂಚಿನ ಕಪ್ಪ

ನಾ ಮಾಡಿದ ತಪ್ಪಾ

ಭೀಮಾರತಿ ಹೊಳಿಯ

ಹೊಳಿತಕ ಸೇಳಿಯ

ಗುಳ್ಳವ್ವ ನಿನ್ನ ಸೇಳಿ

ಬಾಕಲಾ ತಗೀಯ ತಗೀಯ

ಇಂತಹ ಗುಳ್ಳವ್ವನ ಕುರಿತು ಹಾಡುಗಳು ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಕಂಡು ಬರುತ್ತವೆ. ಈ ಹಾಡುಗಳಲ್ಲಿ ಜಾನಪದದ ಸೋಬಗು ಅಡಗಿದ್ದು, ಈ ಹಾಡುಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಕೊಂಚ ಬಿನ್ನವಾಗಿರುತ್ತವೆ. ಇಂತಹ ಮಣ್ಣಿನ ಗುಳ್ಳವಳೆಂದರೆ ಹೆಣ್ಣು ಮಕ್ಕಳಿಗೆ ಬಲು ಅಚ್ಚು ಮೆಚ್ಚು. ಈ ಗ್ರಾಮೀಣ ಹಬ್ಬಗಳು ಹಾಗೂ ಜಾನಪದ ಸಂಗೀತ ಆಧುನಿಕತೆ ಟಿವಿ, ಸಿನಿಮಾ, ಅಂತರಜಾಲದಿಂದಾಗಿ ನಶಿಸುತ್ತಿವೆ. ಜಾನಪದರ ಜಗತ್ತಿನಲ್ಲಿ ಗುಳ್ಳವ್ವ ಮತ್ತು ಆಕೆಯ ಹಾಡುಗಳು ಮಾತ್ರ ಯಾವಾಗಲೂ ಜೀವಂತ.

ಗುಳ್ಳವನ ಪೂಜೆ ಎಂದರೆ ಅದು ಮಣ್ಣಿನ ಪೂಜೆ. ನಮ್ಮ ರೈತರು ಪ್ರತಿವರ್ಷ ಆಯಾ ಸಂದರ್ಭಕ್ಕೆ ಅನುಗುಣವಾಗಿ ಐದು ಬಾರಿ ಮಣ್ಣಿನ ಪೂಜೆಯನ್ನು ಮಾಡಿ ಹಬ್ಬಗಳನ್ನು ಆಚರಿಸುತ್ತಾರೆ. ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳ ಪೂಜೆ. ಆಷಾಢದಲ್ಲಿ ಗುಳ್ಳವ್ವ, ಶ್ರಾವಣ ಮಾಸದಲ್ಲಿ ಮಣ್ಣಿನ ನಾಗದೇವತೆಯ ಪೂಜೆ, ಭಾದ್ರಪದದಲ್ಲಿ ಗಣೇಶನ ಪೂಜೆ ಮತ್ತು ಕೊನೆಯದಾಗಿ ಶೀಗವ್ವ ಇಲ್ಲವೆ ಗೌರಿಯ ಪೂಜೆಯನ್ನು ನೆರವೇರಿಸುತ್ತಾರೆ.

ಒಟ್ಟಿನಲ್ಲಿ ಆಧುನಿಕತೆಯ ಇಂದಿನ ದಿನಗಳಲ್ಲಿಯೂ ಕೂಡಾ ಗುಳ್ಳವ್ವಳ ಪೂಜೆಯನ್ನು ನಮ್ಮ ಜನರು ಆಚರಿಸುತ್ತ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಗುಳ್ಳವ್ವನ ಮಾಡುವ ಕಲೆಯಲ್ಲಿ ಕೂಡಾ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ಕುಂಬಾರರು ಆಧುನಿಕತೆಗೆ ತಕ್ಕಂತೆ ಬದಲಾಗಿದ್ದಾರೆ. ಗುಳ್ಳವ್ವನ ಆಚರಣೆ ಮಾತ್ರ ಎಂದಿನಂತೆ ಇದೆ.

`ಗುಳ್ಳವ್ವ ಫಲವತ್ತತೆಯ ದೇವತೆ, ಆಷಾಡ ಮಾಸದಲ್ಲಿ ಆಕೆಯ ಪೂಜೆ ಮಾಡುವುದರಿಂದ ಮಳೆ, ಬೆಳೆ ಸಮೃದ್ಧಿಯಾಗಿ ಬದುಕು ಸುಖಮಯವಾಗುತ್ತದೆ ಎಂಬ ನಂಬಿಕೆ ಜನಪದರದು. ಜನಪದದ ದೈವ ಮತ್ತು ಧರ್ಮ ಎರಡು ನಂಬಿಕೆಯೇ. ಆದ್ದರಿಂದ ಮಣ್ಣಿನಿಂದ ಗುಳ್ಳವ್ವನ ಮೂರ್ತಿ ಮಾಡುತ್ತಾರೆ. ಆಕೆ ಅಮೂರ್ತ ದೇವತೆ. ಭೂಮಿ ಗೋಲಾಗಿರುವುದರಿಂದ ಆಕೆಗೆ ಗೋಲವ್ವ ಹೆಸರಿನಿಂದ ಕರೆಯುತ್ತಿದ್ದರು ಅದು ಬರ ಬರುತ್ತಾ ಗುಳ್ಳವ ಎಂದು ಆಗಿದ್ದು, ಇಡೀ ಜಗತ್ತಿನ ಫಲವತ್ತತೆಯ ನಂಬಿಕೆ ಗುಳ್ಳವ ದೇವತೆ.’– ಬಿ. ಆರ್. ಪೊಲೀಸಪಾಟೀಲ, ನಾಟಕಕಾರರು, ಹಿರಿಯ ಸಾಹಿತಿಗಳು, ಜಾನಪದ ಕವಿಗಳು, ಬನಹಟ್ಟಿ

 

 -ಕಿರಣ್‌  ಶ್ರೀಶೈಲ ಆಳಗಿ, ಬನಹಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next