Advertisement

ಬನಹಟ್ಟಿ ಸಹಕಾರಿ ನೂಲಿನ ಗಿರಣಿಗೆ ಬೇಕಿದೆ ಕಾಯಕಲ್ಪ

11:13 AM Nov 17, 2019 | Suhan S |

ಬನಹಟ್ಟಿ: 1975ರಿಂದ 85ರ ಅವಧಿಯಲ್ಲಿ ಸ್ಥಾಪನೆಗೊಂಡ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಸರಕಾರ ನೇಕಾರ ಸಮುದಾಯದ ಈ ಕಾರ್ಖಾನೆಗೆ ಆರ್ಥಿಕ ಸಹಾಯ ನೀಡಿ ಮೇಲೆತ್ತಬೇಕಾಗಿದೆ.

Advertisement

ನೂಲಿನ ಗಿರಣಿಗಳು ನೆಲಕಚ್ಚಲು ಸರ್ಕಾರದ ಸಹಕಾರದ ಕೊರತೆ ಮೂಲವಾಗಿದೆ. ಇದಕ್ಕೆ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಹೊರತಾಗಿಲ್ಲ. ಕಳೆದ ಮೂರು ದಶಕಗಳಿಂದ ಆರ್ಥಿಕ ಹಿನ್ನಡೆ ಎದುರಿಸುತ್ತಿದೆ. ಈ ಗಿರಣಿಗೆ ಅಗತ್ಯ ಕಾಯಕಲ್ಪ ಬೇಕಿದೆ. ಹಳೆಯ ಯಂತ್ರಗಳಿಂದ ಗಿರಣಿ ನಡೆಯುತ್ತಿದ್ದು, ಹೊಸ ಯಂತ್ರ ಖರೀದಿಗೆ ಸರ್ಕಾರ ಕೋಟಿ ರೂ. ವ್ಯಯಿಸಬೇಕಿದೆ.

ನೂಲಿನ ಗಿರಣಿಗೆ 2006ರಿಂದ ಲೀಜ್‌ ವಿಸ್ತರಣೆಯಾಗಿಲ್ಲ. ತಕ್ಷಣವೇ 99 ವರ್ಷಗಳವರೆಗೆ ಕಾನೂನಾತ್ಮಕವಾಗಿ ಲೀಜ್‌ ಮುಂದುವರಿಸಬೇಕಾಗಿದೆ. ಮಾಸಿಕವಾಗಿ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ ಬರುತ್ತಿದೆ. ಈ ಸಂಬಂಧ ಸರ್ಕಾರದ ಅನುದಾನದಲ್ಲಿ 20 ಕೋಟಿ ರೂ. ವಿದ್ಯುತ್‌ ಸರಬರಾಜಿಗೆ ಸೋಲಾರ್‌ ಘಟಕ ಸ್ಥಾಪಿಸುವ ಯೋಜನೆ ಸರ್ಕಾರದಿಂದ ಆಗಬೇಕು. ದುಡಿಯುವ ಬಂಡವಾಳವಿಲ್ಲದೆ ಕಠಿಣ ಸಮಸ್ಯೆ ಎದುರಿಸುತ್ತಿರುವ ಬನಹಟ್ಟಿ ಸಹಕಾರಿ ನೂಲಿನ ಗಿರಣಿಗೆ 10 ಕೋಟಿ ರೂ. ಬಂಡವಾಳ ಸಹಾಯ ಅನಿವಾರ್ಯವಾಗಿದೆ. ಕೇಂದ್ರದ ಸಿಸಿಐ ನಿಬಂಧನೆಯಲ್ಲಿ ಕಾಟನ್‌ ಖರೀದಿಸಿದರೆ ಮಾತ್ರ ಶೇ. 5 ಸಬ್ಸಿಡಿಯಿದೆ. ಖಾಸಗಿಯಾಗಿಯೂ ಸಬ್ಸಿಡಿ ದರದಲ್ಲಿ ಕಾಟನ್‌ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಶೇ. 5 ರ ಬದಲಾಗಿ ಶೇ. 10 ರಿಯಾಯ್ತಿ ನೀಡಿದ್ದಲ್ಲಿ ನೂಲಿನ ಗಿರಣಿಗಳಿಗೆ ಆರ್ಥಿಕ ಸಹಾಯವಾಗಬಹುದು.

ನೂರಾರು ಕುಟುಂಬಗಳ ನಿರ್ವಹಣೆ: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ 400ಕ್ಕೂ ಅಧಿಕ ಕುಟುಂಬಗಳು ನೂಲಿನ ಗಿರಣಿ ಮೇಲೆ ಜೀವನ ಸಾಗಿಸುತ್ತಿವೆ. ವೇತನ ಕಡಿಮೆಯಿದ್ದರೂ ಅನಿವಾರ್ಯವಾಗಿ ಜೀವನ ಸಾಗಿಬೇಕಾದ ಅನಿವಾರ್ಯತೆಯಿದೆ. ಸರ್ಕಾರ ನೂಲಿನ ಗಿರಣಿ ಪುನಶ್ಚೇತನಕ್ಕೆ ಪೂರ್ಣ ತಯಾರಿಯಾಗುವುದರ ಜತೆಗೆ ನೇಕಾರಿಕೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ ಸರ್ಕಾರದ್ದಾಗಿದೆ. ಕೆಲ ದಿನಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ವಿಜಯಕುಮಾರ ಜುಂಜಪ್ಪನವರ ಮೇಲೆ ಮಹತ್ತರ ಜವಾಬ್ದಾರಿಯಿದೆ.

ನೂಲಿನ ಗಿರಣಿ ಪುನಃಶ್ಚೇತನಕ್ಕೆ ಸರ್ಕಾರ ಶ್ರಮಿಸಬೇಕಿದೆ. ಬನಹಟ್ಟಿ ಸಹಕಾರಿ ನೂಲಿನ ಗಿರಣಿಗೆ ದೊಡ್ಡ ಇತಿಹಾಸವಿದೆ. ಇದರ ಉಳಿವಿಗಾಗಿ ನಮ್ಮ ಹೋರಾಟ ನಡೆದಿದ್ದು, ಸರ್ಕಾರದ ಸ್ಪಂದನೆ ಅನಿವಾರ್ಯವಾಗಿದೆ.  ವಿಜಯಕುಮಾರ ಜುಂಜಪ್ಪನವರ, ಅಧ್ಯಕ್ಷರು ಬನಹಟ್ಟಿ  ಸಹಕಾರಿ ನೂಲಿನ ಗಿರಣಿ

Advertisement

ದುಡಿಯುವ ಬಂಡವಾಳ ಹಾಗೂ ಹತ್ತಿ ಖರೀದಿ ನೂಲಿನ ಗಿರಣಿಗಳಿಗೆ ಸವಾಲಿನ ಪ್ರಶ್ನೆಯಾಗಿದೆ. ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಸಹಾಯ ನೀಡುತ್ತಿರುವ ಸರ್ಕಾರ ನೂಲಿನ ಗಿರಣಿಗಳ ಮೇಲೆ ಕಾಳಜಿ ವಹಿಸಬೇಕು.  –ಶಂಕರ ಸೊರಗಾಂವಿ, ನಿರ್ದೇಶಕರು ನೂಲಿನ ಗಿರಣಿ

 

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next