Advertisement

ನಾಳೆ 34,337 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; ದ್ವಾರಕೀಶ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

12:49 PM Dec 04, 2022 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 57ನೇ ವಾರ್ಷಿಕ ಘಟಿಕೋತ್ಸವ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆಯಲಿದೆ ಎಂದು ಕುಲಪತಿ ಡಾ|ಎಸ್‌. ಎಂ.ಜಯಕರಶೆಟ್ಟಿ ತಿಳಿಸಿದ್ದಾರೆ.

Advertisement

ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದಾರೆ.

ವಿವಿಯ ಅನುದಾನ ಆಯೋಗದ ಅಧ್ಯಕ್ಷ ಪ್ರೊ. ಎಂ.ಜಗದೀಶ್‌ ಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. 57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 300 ಚಿನ್ನದ ಪದಕಗಳು, 73 ನಗದು ಬಹುಮಾನವನ್ನು ಒಟ್ಟು 167 ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. 267 ಸಂಶೋ ಧನಾ ಅಭ್ಯರ್ಥಿಗಳಿಗೆ ಡಾಕ್ಟರೆಟ್‌ ಪದವಿ ಪ್ರದಾನ ಮಾಡಲಾಗುವುದು. 20 ಗ್ರಾಂ ಬೆಳ್ಳಿ ಬಿಲ್ಲೆಯ ಮೇಲೆ 1.3 ಗ್ರಾಂ ಚಿನ್ನ ಲೇಪಿತ ಪದಕಗಳನ್ನು ನೀಡಲಾಗುವುದು ಎಂದರು.

ಬೆಂಗಳೂರು ವಿವಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ 34,337 ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣ ಸಚಿವಾಲಯ, ಕೇಂದ್ರ ಸರ್ಕಾರದ ಉಪಕ್ರಮವಾದ ಡಿಜಿ ಲಾಕರ್‌ ಮತ್ತು ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿ(ಎನ್‌ಎಡಿ)ನಿಂದ ಡೌನ್‌ಲೋಡ್‌ ಮಾಡಬಹುದಾಗಿದೆ. ಘಟಿಕೋತ್ಸವದ ನಂತರ ಪ್ರಮಾಣ ಪತ್ರಗಳ ಹಾರ್ಡ್‌ಕಾಪಿಯನ್ನು ಸಹ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹುಡುಗಿಯರದ್ದೇ ಮೇಲುಗೈ: ಈ ಬಾರಿಯೂ ಚಿನ್ನದ ಪದಕ ಸೇರಿದಂತೆ ಅತಿ ಹೆಚ್ಚು ಬಹುಮಾನಗಳನ್ನು ಪಡೆದವರಲ್ಲಿ ವಿದ್ಯಾರ್ಥಿನಿಯರೇ ಮೊದಲಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೀರ್ತಿ ನೇಗಿನ್ಹಾಲ್‌ ಮತ್ತು ಬೆಂ.ವಿ.ಬೆಂ. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕೆ.ಅರ್ಚನ ಅವರು ತಲಾ 7 ಚಿನ್ನದ ಪದಕ ಪಡೆದು, ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ. ಬೆಂ.ವಿ.ಬೆಂ ಸಂಸ್ಕೃತ ವಿಭಾಗದ ವಿದ್ಯಾರ್ಥಿ ಮಯೂರ ಅವರು 6 ಚಿನ್ನದ ಪದಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಬೆಂ.ವಿ.ಬೆಂ.ನ ವಿದ್ಯಾರ್ಥಿಗಳಾದ ಬಿ.ಎಚ್‌. ಚಂದ್ರಿಕ(ಅರ್ಥಶಾಸ್ತ್ರ ವಿಭಾಗ), ಎಸ್‌.ಚೇತನ್‌ ಸೂರ್ಯ(ಭೌತಶಾಸ್ತ್ರ ವಿಭಾಗ), ಎನ್‌.ಅರ್ಚನ (ಸಸ್ಯಶಾಸ್ತ್ರ ವಿಭಾಗ) ಮತ್ತು ಆರ್ಷಿಯ ನಾಜ್‌(ಪ್ರಾಣಿಶಾಸ್ತ್ರ ವಿಭಾಗ) ಇವರು ತಲಾ 5 ಚಿನ್ನದ ಪದಕ ಗಳಿಸಿದ್ದಾರೆ.

Advertisement

ದ್ವಾರಕೀಶ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌: ಘಟಿಕೋತ್ಸವದಲ್ಲಿ ಖ್ಯಾತ ನಟ, ನಿರ್ಮಾಪಕ ಬಂಗ್ಲೆ ಶಾಮರಾವ್‌ ದ್ವಾರಕನಾಥ್‌ (ದ್ವಾರಕೀಶ್‌), ಅಮರನಾಥ ಗೌಡ ಕಾನೂನು ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷ ಅಮರನಾಥ ಗೌಡ ಮತ್ತು ಖ್ಯಾತ ಕಲಾವಿದ, ಛಾಯಾಗ್ರಾಹಕ ಡಾ.ಟಿ.ಅನಿಲ್‌ ಕುಮಾರ್‌ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ಪ್ರದಾನ ಮಾಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next