ರಾಸಾಯನಿಕಗಳು ಮತ್ತು ಕೃತಕ ರಾಸಾಯನಿಕಗಳನ್ನು ಬಳಸಿದ ವಿವಿಧ ಆಹಾರ ಖಾದ್ಯಗಳನ್ನು ರಾಜ್ಯ ಸರಕಾರ ನಿಷೇಧಿಸಿದೆ. ಹಲವು ಖಾದ್ಯಗಳಲ್ಲಿ ಬಣ್ಣಕ್ಕಾಗಿ ಕೃತಕ ರಾಸಾಯನಿಕಗಳಾದ ಟಾರ್‌ಟ್ರಾಸೈನ್, ಸನ್‌ಸೆಟ್ ಎಲ್ಲೋ, ಕಾರ್ಮೊಸಿನ್‌ಗಳನ್ನು ಬಳಸುತ್ತಿರುವುದು ಪತ್ತೆಯಾಗಿದ್ದು, ಇವುಗಳಲ್ಲಿ ಕ್ಯಾನ್ಸರ್‌ಕಾರಕವಾದ ರೋಡಮೈನ್-ಬಿ ಅಂಶಗಳಿರುವುದು ಪರೀಕ್ಷೆಯ ವೇಳೆ ಸಾಬೀತಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ಇಂತಹ ಖಾದ್ಯಗಳನ್ನು ನಿಷೇಧಿಸಿ ಸರಕಾರ ಸುತ್ತೋಲೆ ಹೊರಡಿಸಿದೆ.
ಈ ಆದೇಶವನ್ನು ಉಲ್ಲಂಘಿಸಿದರೆ 7 ವರ್ಷಗಳಿಂದ ಜೀವಿತಾವಧಿಯವರೆಗೆ ಜೈಲು ಶಿಕ್ಷೆ ಮತ್ತು 10 ಲ.ರೂ.ಗಳ ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸದ್ಯ ರಾಜ್ಯದಾದ್ಯಂತ ಬೀದಿಬದಿಯಲ್ಲಿರುವ ಆಹಾರ ಖಾದ್ಯ ತಯಾರಿ ಅಂಗಡಿಗಳು, ಸ್ಟಾರ್ ಹೊಟೇಲ್‌ಗಳ ಸಹಿತ ಎಲ್ಲ ತೆರನಾದ ಹೊಟೇಲ್‌ಗಳಲ್ಲಿ ತಯಾರಿಸಲಾಗುವ ಗೋಬಿ ಮಂಚೂರಿ, ಪಾನಿ ಪೂರಿ, ಕಬಾಬ್‌ಗಳಲ್ಲಿ ಇಂತಹ ಕೃತಕ ರಾಸಾಯನಿಕಗಳನ್ನು ಬಳಸುತ್ತಿರುವುದು ದೃಢಪಟ್ಟಿದೆ. ಕೃತಕ ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಖಾದ್ಯಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಮಹಾಮಾರಿ, ಮೂತ್ರಪಿಂಡ, ಹೃದಯ, ಮೆದುಳಿನ ಹಾನಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಇಲಾಖೆ ಮನವಿ ಮಾಡಿಕೊಂಡಿದೆ. ಆಹಾರ ಖಾದ್ಯಗಳ ತಯಾರಿ ವೇಳೆ ರಾಸಾಯನಿಕಗಳ ಬಳಕೆಗೆ ಸರಕಾರ ಈ ಹಿಂದಿನಿಂದಲೂ ನಿಷೇಧ ಹೇರುತ್ತಲೇ ಬಂದಿದೆ. ಒಂದಿಷ್ಟು ದಿನಗಳ ಕಾಲ ಭಾರೀ ಚರ್ಚೆ, ತಪಾಸಣೆ, ಆರೋಗ್ಯ ಇಲಾಖಾಧಿಕಾರಿಗಳ ದಾಳಿ ಮತ್ತಿತರ ಕಾರ್ಯಾಚರಣೆಗಳ ಮೂಲಕ ಸುದ್ದಿಯಾಗಿ ಆ ಬಳಿಕ ಈ ಆದೇಶ ತೆರೆಮರೆಗೆ ಸರಿಯುವುದು ರಾಜ್ಯದಲ್ಲಿ ಹೊಸದೇನಲ್ಲ. ಈಗ ಮತ್ತೆ ಆರೋಗ್ಯ ಇಲಾಖೆ ಇಂತಹುದೇ ಆದೇಶ ಹೊರಡಿಸಿದ್ದು ಇದು ಕೂಡ ಈ ಹಿಂದಿನ ಹಾದಿ ಹಿಡಿಯದಿರಲಿ ಎಂಬುದೇ ಜನರ ಆಶಯ.
ಹೊಟೇಲ್ ಮತ್ತು ಬೀದಿಬದಿಯ ಅಂಗಡಿಗಳಲ್ಲಿ ತಯಾರಿಸಲಾಗುವ ಇಂತಹ ಖಾದ್ಯಗಳು ಜನರನ್ನು ಬಲುಬೇಗ ಆಕರ್ಷಿಸುತ್ತದೆ. ನಾಲಗೆಗೆ ರುಚಿಕರವಾಗಿರು ವುದರಿಂದ ಸಹಜವಾಗಿ ಜನರು ಈ ಖಾದ್ಯಗಳನ್ನು ಸೇವಿಸಲು ಮುಗಿ ಬೀಳುತ್ತಾರೆ. ಇನ್ನು ಕಾಟನ್ ಕ್ಯಾಂಡಿ ತನ್ನ ಅತ್ಯಾಕರ್ಷಕ ಬಣ್ಣದಿಂದಾಗಿಯೇ ಮಕ್ಕಳನ್ನು ತಮ್ಮತ್ತ ಸೆಳೆ ಯುತ್ತವೆ. ಈ ಖಾದ್ಯಗಳಲ್ಲಿ ಬಳಸಲಾಗಿರುವ ಬಣ್ಣದ ಬಗೆಗೆ ಸಾಮಾನ್ಯವಾಗಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಮಾರಾಟಗಾರರಿಗೆ ವ್ಯಾಪಾರವೇ ಮುಖ್ಯ ವಾಗಿರುವುದರಿಂದ ಜನರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗೆಗೆ ತಲೆಕೆಡಿಸಿಕೊಳ್ಳುವುದಿಲ್ಲ.
ವಾಸ್ತವವಾಗಿ ಬಹುತೇಕ ಪ್ರಕರಣಗಳಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳು ಮತ್ತವುಗಳ ಪರಿಣಾಮಗಳ ಬಗೆಗೆ ಗ್ರಾಹಕರಿಗೆ ಅಥವಾ ತಯಾರಕರಿಗೆ ಮಾಹಿತಿಯೇ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ನಿರಂತರವಾಗಿ ಅಭಿಯಾನವನ್ನು ನಡೆಸಬೇಕು. ಖಾದ್ಯಗಳಲ್ಲಿ ಬಳಸಲಾಗುವ ರಾಸಾ ಯನಿಕಗಳು, ಅದರ ದುಷ್ಪರಿಣಾಮಗಳು, ಕಾನೂನುಗಳ ಬಗ್ಗೆ ಮಾಹಿತಿಗಳನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಜನರಿಗೆ ಹಂಚಿ, ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಅಂಗಡಿಗಳು, ಹೊಟೇಲ್‌ಗಳಲ್ಲಿ ತಯಾರಿ ಸಲಾಗುವ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಬೇಕು. ಹೀಗಾದಾಗ ಮಾತ್ರವೇ ಇಂತಹ ಅಸುರಕ್ಷಿತ ಖಾದ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ. ಇದೇ ವೇಳೆ ಆಹಾರ ಧಾನ್ಯಗಳಿಗೆ ಹುಳ-ಹುಪ್ಪಟೆ ಹಿಡಿಯದಂತೆ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು ಇದು ಕೂಡ ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಬಗ್ಗೆಯೂ ಆರೋಗ್ಯ ಇಲಾಖೆ ನಿಗಾ ಇಡಬೇಕು.