ನವದೆಹಲಿ: ಮುಂದಿನ ವರ್ಷದ ಮಾರ್ಚ್‌ವರೆಗೆ ಈರುಳ್ಳಿ ರಫ¤ನ್ನು ನಿಷೇಧಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ದೇಶೀಯವಾಗಿ ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸುವ ಮತ್ತು ದರ ಏರಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ರಫ್ತು ನೀತಿಗೆ ತಿದ್ದುಪಡಿ ತರಲಾಗಿದ್ದು, 2024ರ ಮಾರ್ಚ್ 31ರವರೆಗೆ ಈರುಳ್ಳಿಯ ರಫ್ತಿಗೆ ನಿರ್ಬಂಧ ಹೇರಲಾಗಿದೆ ಎಂದು ವಿದೇಶಿ ವ್ಯವಹಾರದ ಮಹಾ ನಿರ್ದೇಶನಾಲಯ ತಿಳಿಸಿದೆ. ದೆಹಲಿಯಲ್ಲಿ ಪ್ರಸ್ತುತ ಈರುಳ್ಳಿ ದರ ಕೆಜಿಗೆ 70-80ರೂ. ಇದೆ.
ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಈರುಳ್ಳಿ ದರವು ಗಣನೀಯವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದಾಸ್ತಾನು ಇಟ್ಟಿದ್ದ ಈರುಳ್ಳಿಯನ್ನು ಕೆಜಿಗೆ 25 ರೂ.ಗಳಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿತ್ತು.
ರೈತರ ಪ್ರತಿಭಟನೆ:
ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿದ್ದನ್ನು ಖಂಡಿಸಿ ಶುಕ್ರವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೂರಾರು ರೈತರು ಜಮಾಯಿಸಿ, ಮುಂಬೈ-ಆಗ್ರಾ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಲಸಲ್‌ಗಾಂವ್, ನಂದಗಾಂವ್, ಪಿಂಪಲ್‌ಗಾಂವ್ ಮತ್ತು ಉಮಾರಾಣೆಯ ಮಾರುಕಟ್ಟೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಲಾಗಿದೆ.