ಉಡುಪಿ : ಭಾರತ ಸೇರಿದಂತೆ ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನು ತನ್ನ ಕಪಿ ಮುಷ್ಟಿಗೆ ತರಲು ಚೀನ ಬಯಸುತ್ತಿದೆ. ಚೀನದ ಕಳಪೆ ಮಿಷನ್‌ಗಳ ಬಳಕೆಯನ್ನು ಭಾರತದ ಕಂಪೆನಿಗಳು ನಿಲ್ಲಿಸಬೇಕು. ಹೀಗೆ ಮುಂದುವರಿದರೆ ದೇಶ ದ ಆರ್ಥಿಕ ಸ್ಥಿತಿ ಕುಸಿಯಬಹುದು. ಹೀಗಾಗಿ ದೇಶದಲ್ಲಿ ಚೀನ ವಸ್ತುಗಳ ನಿಷೇಧ ಅತ್ಯಗತ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂವೇದನಾ ಫೌಂಡೇಶನ್ಸ್ ವತಿ ಯಿಂದ ಚೀನ ವಸ್ತು ಬಹಿಷ್ಕಾರ, ಡ್ರಗ್ಸ್ ನಿಷೇಧ, ಪರಿಸರ ಜಾಗೃತಿ ಕುರಿತಾಗಿ ನಡೆದ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಬೀದಿ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಅಜ್ಜರಕಾಡು ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಚೀನ ಭಾರತದ ಮೇಲೆ ಆಕ್ರಮಣಕ್ಕೆ ಯತ್ನಿಸುತ್ತಿದೆ. ದೇಶದ ಆರ್ಥಿಕ ಭದ್ರತೆಗೆ ಚೀನ ವಸ್ತುಗಳನ್ನು ಬಿಡಬೇಕು. ಕಂಪೆನಿಗಳಿಗೆ ತರುವ ಮಿಷನ್‌ಗಳ ನಿರ್ವಹಣೆಗೆ ಚೀನದ ಎಂಜಿನಿಯರ್‌ಗಳು ಆಗಮಿಸುತ್ತಾರೆ. ಅವರ ಜತೆಗೆ ಗೂಢಚಾರ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಯುವ ಜನತೆಯನ್ನು ಕೆಡಿಸಲು ಡ್ರಗ್ಸ್ ನೀಡುವ ವ್ಯ ವಸ್ಥಿತ ಜಾಲ ಹರಿದಾಡುತ್ತಿದೆ. ವಿದೇಶಿಗರ ಕೈವಾಡವಿದ್ದು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಅವರ ಗುರಿ. ದೇಶದ ಅನೇಕ ನಗರಗಳಲ್ಲಿ ಈ ಜಾಲವಿದೆ. ವಿದ್ಯಾರ್ಥಿಗಳೇ ಈ ಬಗ್ಗೆ ಅರಿವು ಮೂಡಿಸಿ ಅದರ ವಿರುದ್ಧ ಹೋರಾಡಬೇಕು ಎಂದರು. ಸ್ಪರ್ಧೆಯ ತೀರ್ಪುಗಾರರಾದ ಬಾಸುಮ ಕೊಡಗು, ಉಪನ್ಯಾಸಕ ಶಮಂತ್ ಅವರನ್ನು ಸಮ್ಮಾನಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆ ಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಶ್ಯಾಮಲಾ ಕುಂದರ್, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಫೌಂಡೇಶನ್‌ನ ಉಪಾಧ್ಯಕ್ಷ ರವಿ, ನ್ಯಾಯವಾದಿ ಆನಂದ ಮಡಿವಾಳ, ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು.
ಕಿದಿಯೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ರಾಧಾಕೃಷ್ಣ ಶೆಟ್ಟಿ ನಿರೂಪಿಸಿದರು.
ಬೀದಿ ನಾಟಕ ನಶಿಸುತಿದೆ…
ಎಲೆಕ್ಟ್ರಾನಿಕ್ ಮಾಧ್ಯಮ ಇಲ್ಲದ ಕಾಲದಲ್ಲಿ ಬೀದಿ ನಾಟಕದ ಮೂಲಕ ಜನತೆಗೆ ಅನೇಕ ವಿಷಯಗಳ ಅರಿವು ಮೂಡಿ ಸಲಾಗುತ್ತಿತ್ತು. ಇತ್ತೀಚೆಗೆ ಬೀದಿ ನಾಟಕ ನಶಿಸುತ್ತಿದೆ. ನೋಡುವವರು ಇದ್ದಾರೆ, ಆಡುವವರು ಕಡಿಮೆಯಾಗಿದ್ದಾರೆ. ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಬೀದಿ ನಾಟಕ ನಡೆಸಿ ಸಮಾ ಜಕ್ಕೆ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
ಶೋಭಾ ಕರಂದ್ಲಾಜೆ,
ಸಂಸದೆ