ಮಂಗಳೂರು: ಪ್ಲಾಸ್ಟಿಕ್ ನಿಷೇಧದ 2016ರ ನಿಯಮಾವಳಿಯನ್ನು ಇದೇ ಜುಲೈ 1ರಿಂದ ಕಡ್ಡಾಯವಾಗಿ ಎಲ್ಲೆಡೆ ಅನು ಷ್ಠಾನಗೊಳಿಸಲಾಗುತ್ತಿದೆ. ದ.ಕ. ಜಿಲ್ಲೆ ಯಲ್ಲಿ ಈ ಬಾರಿ ಪ್ಲಾಸ್ಟಿಕ್ ಉತ್ಪಾದಕರ ಮೇಲೆ ನಿಗಾ ಇರಿಸಲಾಗುತ್ತಿದ್ದು, ಮೂಲ ದಿಂದಲೇ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರುವ ಆಶಾಭಾವನೆ ಇದೆ.
ಈ ಹಿಂದೆ ಹಲವು ವರ್ಷಗಳ ಹಿಂದೆಯೇ ರಾಜ್ಯ ಸರಕಾರವೂ ಪ್ಲಾಸ್ಟಿಕ್ ನಿಷೇಧಿಸಿ ಆದೇಶಿಸಿದ್ದರೂ ಅದು ಸರಿಯಾಗಿ ಕಾರ್ಯರೂಪಕ್ಕೆ ಬಂದಿರಲಿಲ್ಲ. ಕೇವಲ ಮನಪಾ ಮತ್ತು ಇತರ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಮಾರಾಟದ ಜಾಗದಲ್ಲಿ ದಾಳಿ ನಡೆಸಿ ದಂಡ ವಿಧಿಸುವುದಕ್ಕೆ ಸೀಮಿತವಾಗಿದ್ದರೆ, ಅನಂತರದಲ್ಲಿ ಅದೂ ಸರಿಯಾಗಿ ನಡೆದಿಲ್ಲ. ಕೋವಿಡ್ ಬಳಿಕವಂತೂ ಪ್ಲಾಸ್ಟಿಕ್ ಬಳಕೆ ಮತ್ತೆ ಏರಿಕೆ ಕಂಡಿತು. ಮನೆಬಾಗಿಲಿಗೆ ರೆಡಿಮೇಡ್ ಫುಡ್ ಪೂರೈಕೆಯಲ್ಲಿ ಪ್ಯಾಕಿಂಗ್‌ಗೆ ಅಧಿಕವಾಗಿ ಪ್ಲಾಸ್ಟಿಕ್ ಬಳಕೆಯಾಗಿದ್ದಲ್ಲದೆ ಶುಚಿಯಾಗಿರಬೇಕು ಎಂಬ ಕಾರಣಕ್ಕೆ ಯೂಸ್ ಆ್ಯಂಡ್ ತ್ರೋ ವಸ್ತುಗಳು ಹೆಚ್ಚಾದವು.
ಎಲ್ಲೆಡೆ ನಿಯಂತ್ರಣ :
ಹಿಂದೆ ರಾಜ್ಯ ಸರಕಾರ ಮಾತ್ರ ಪ್ಲಾಸ್ಟಿಕ್ ನಿಷೇಧ ಮಾಡಿತ್ತು, ಆದರೆ ಸುತ್ತಲಿನ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾ ರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಲ್ಲಿ ನಿಷೇಧ ಇರಲಿಲ್ಲ. ಹಾಗಾಗಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರುತ್ತಲೇ ಇತ್ತು, ಅದನ್ನು ನಿಯಂತ್ರಿಸುವುದು ಹರ ಸಾಹಸ ವಾಗುತ್ತಿತ್ತು, ಆದರೆ ಈ ಬಾರಿ ಎಲ್ಲ ಕಡೆ ಪ್ಲಾಸ್ಟಿಕ್ ನಿಷೇಧ ಹೇರಿರುವುದು ಅನುಕೂಲ ಕರವಾಗಿದೆ ಎನ್ನುತ್ತಾರೆ ಪುತ್ತೂರಿನ ಪುರಸಭೆ ಮುಖ್ಯಾಧಿಕಾರಿ ಮಧು.
ಜಿಲ್ಲೆಯಲ್ಲಿ ಒಟ್ಟು 40ರಷ್ಟು ಪ್ಲಾಸ್ಟಿಕ್ ಉತ್ಪಾದಕರಿದ್ದಾರೆ, ಪ್ಲಾಸ್ಟಿಕ್ ಉತ್ಪಾದನಾ ಘಟಕಗಳಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ತಂಡ ರಚಿಸಿ ಪರಿ ಶೀಲನೆ ನಡೆಸಲಾಗುತ್ತಿದೆ. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಸಿಕ್ಕಿದರೆ ದಂಡ ವಿಧಿಸಲಾಗುತ್ತಿದೆ, ಆದರೆ ಎಲ್ಲರಿಗೂ ಈ ಮಾಹಿತಿ ಈಗಾಗಲೇ ಇರುವುದರಿಂದ ಅಂತಹ ಪ್ಲಾಸ್ಟಿಕ್ ಇಲ್ಲ ಎಂದು ಮಂಡಳಿಯ ಮಂಗಳೂರು ವಿಭಾಗದ ಅಧಿಕಾರಿ ಕೀರ್ತಿ ಕುಮಾರ್ ಹೇಳುತ್ತಾರೆ.
ಸದ್ಯ ಜಿಲ್ಲೆಯಾದ್ಯಂತ ಜಾಗೃತಿ ಮೂಡಿ ಸುವು ದಕ್ಕೇ ಒತ್ತು ನೀಡಲಾಗುತ್ತಿದೆ, ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ದಂಡ ಸಂಗ್ರಹ ವನ್ನೂ ಆರಂಭಿಸಲಾಗಿದೆ. ಒಂದು ತಿಂಗಳು ಪೂರ್ತಿ ಜಾಗೃತಿ ಮೂಡಿಸಿದ ಬಳಿಕ ತಪಾಸಣೆ ಹಾಗೂ ದಂಡ ಹಾಕುವ ಪ್ರಕ್ರಿಯೆಗೆ ವೇಗ ನೀಡಲು ಜಿಲ್ಲಾಡಳಿತವೂ ಎಲ್ಲ ಗ್ರಾ. ಪಂ., ನಗರ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸೂಚನೆ ನೀಡಿದೆ.
-ವೇಣುವಿನೋದ್ ಕೆ.ಎಸ್.