Advertisement

ಇಂದಿನಿಂದ ಯಾಂತ್ರಿಕ ಮೀನುಗಾರಿಕೆ ನಿಷೇಧ; ಡೀಸೆಲ್‌ ಹೊರೆಯಿಂದ ಬಹುತೇಕ ಬೋಟುಗಳು ನಷ್ಟದಲ್ಲಿ

02:02 AM Jun 01, 2022 | Team Udayavani |

ಮಲ್ಪೆ/ಮಂಗಳೂರು: ರಾಜ್ಯ ಸರಕಾರ ಯಾಂತ್ರಿಕ ಮೀನುಗಾರಿಕೆಗೆ ಜೂ. 1ರಿಂದ ಜು. 31ರ ವರೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಎಲ್ಲ ಯಾಂತ್ರಿಕ ಮೀನುಗಾರರು ತಮ್ಮ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ.

Advertisement

ಬುಧವಾರ ಈ ಋತುವಿನ ಯಾಂತ್ರಿಕ ಮೀನುಗಾರಿಕೆಗೆ ಅಧಿಕೃತ ತೆರೆ ಬೀಳಲಿದೆ. ಎಪ್ರಿಲ್‌, ಮೇ ತಿಂಗಳು ವಿಪುಲ ವಾಗಿ ಮೀನುಗಾರಿಕೆ ನಡೆಸುವ ಸಮಯ. ಆಗ ಅತ್ಯಧಿಕ ಸ‌ಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಕೆಲವು ವರ್ಷಗಳಿಂದ ಸಿಗದ ಬೂತಾಯಿ, ಬಂಗುಡೆ ಮತ್ತು ಬೊಂಡಾಸ್‌ ಮೀನುಗಳು ಈ ಬಾರಿ ಕಾಣಸಿಕ್ಕಿವೆ. ಆದರೆ ಏರುತ್ತಿರುವ ಡೀಸೆಲ್‌ ದರ ಮೀನು ಗಾರಿಕೆಗೆ ತಡೆಯೊಡ್ಡಿದೆ. ನಷ್ಟದ ಭೀತಿಯಲ್ಲಿ ಮಾಲಕರು ಬೋಟುಗಳನ್ನು ಲಂಗರು ಹಾಕಿದ್ದಾರೆ.

ರೋಡ್‌ಸೆಸ್‌ನಿಂದ
ವಿನಾಯಿತಿಗೆ ಆಗ್ರಹ
ಬೋಟುಗಳು ನೀರಿನಲ್ಲಿ ಚಲಿಸುವುದರಿಂದ ಮೀನುಗಾರಿಕೆಗೆ ರೋಡ್‌ಸೆಸ್‌ ಬರುವುದಿಲ್ಲ. ಈಗಿನ ಡೀಸೆಲ್‌ ದರದಲ್ಲಿ ಒಂದು ಪ್ರಯಾಣದಲ್ಲಿ 6 ಲಕ್ಷ ರೂ. ಮೌಲ್ಯದ ಮೀನು ಹಿಡಿದರೂ ಲಾಭದಾಯಕವಲ್ಲ. ಆದ್ದರಿಂದ ಕರಾವಳಿ ಭಾಗದ ಸಂಸದರು, ಶಾಸಕರು ಸೇರಿ ಮೀನುಗಾರರಿಗೆ ರೋಡ್‌ಸೆಸ್‌ನಿಂದ ವಿನಾಯಿತಿ ಸಿಗುವಂತೆ ಮಾಡಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸತೀಶ್‌ ಕುಂದರ್‌ ಆಗ್ರಹಿಸಿದ್ದಾರೆ.

ಮೀನು ಇಳಿಸಲು ಅವಕಾಶ
ಜೂ. 1ರಿಂದ ಯಾಂತ್ರಿಕ ಮೀನು ಗಾರಿಕೆಗೆ ರಜೆ ಇದ್ದರೂ ಬಂದರು ಸೇರಿರುವ ಬೋಟುಗಳಿಂದ ಮೀನು ಖಾಲಿ ಮಾಡಲು ಕೆಲವು ದಿನಗಳ ಅವಕಾಶ ಕಲ್ಪಿಸಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ತಿಳಿಸಿದ್ದಾರೆ.

ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 198 ರ ಅನ್ವಯ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಜೂ. 1ರಿಂದ ಜು. 31ರವರೆಗೆ ಯಾಂತ್ರಿಕೃತ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಮೀನುಗಾರರು ಕಡ್ಡಾಯವಾಗಿ ಸರಕಾರದ ಆದೇಶವನ್ನು ಪಾಲಿಸಬೇಕಾಗಿದೆ. ಕಾನೂನು ಉಲ್ಲಂಘಿಸಿದರೆ ಸರಕಾರದಿಂದ ಸಿಗುವ ಮಾರಾಟ ಕರ ರಹಿತ ಡೀಸೆಲ್‌, ಇತರ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಮತ್ತು ದಂಡನೆಗೆ ಗುರಿಯಾಗುತ್ತಾರೆ.
– ಗಣೇಶ್‌ ಕೆ., ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ

Advertisement

ಮಳೆಗಾಲದಲ್ಲಿ ನಾಡದೋಣಿ
ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದ್ದರೂ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. 12 ನಾಟಿಕಲ್‌ ಮೈಲುನೊಳಗೆ 10 ಅಶ್ವಶಕ್ತಿಯ ಎಂಜಿನ್‌ ಬಳಸಿದ ದೋಣಿಗಳಲ್ಲಿ ಸಮುದ್ರತೀರದಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ ಎಂದು ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next