ಬೆಂಗಳೂರು: ಒಂದೆಡೆ ಮಳೆ ಕೈಕೊಟ್ಟು ರೈತರು ಸಂಕ ಷ್ಟಕ್ಕೆ ಸಿಲುಕಿದ್ದಾರೆ. ಮತ್ತೂಂದೆಡೆ ಅದೇ ರೈತರಿಂದ ಖರೀದಿಸುವ ಹಾಲಿನ ದರವನ್ನು ಏಕಾಏಕಿ ಕಡಿತಗೊಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯಲಾಗಿದೆ.
ಬೆಂಗಳೂರು ಸಹಕಾರ ಹಾಲು ಒಕ್ಕೂ ಟದ ಮಹಾಮಂಡಳಿ (ಬ ಮೂ ಲ್) ತನ್ನ ವ್ಯಾಪ್ತಿಯಲ್ಲಿ ಬರುವ ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಸರಿಸುಮಾರು 2.85 ರೂ. ಕಡಿತಗೊಳಿಸಿದೆ. ಅಲಿಖಿತವಾಗಿ ಹೊರಡಿಸಿದ ಈ ಫರ್ಮಾನು ಈಗಾಗಲೇ ಬಹುತೇಕ ಕಡೆ ಜಾರಿಗೆ ಬಂದಿದ್ದು, ಸಾವಿರಾರು ರೈತರಿಗೆ ಇದರ ಬಿಸಿ ತಟ್ಟಲು ಆರಂಭವಾಗಿದೆ. ಈ ಮೊದಲು ಪ್ರತಿ ಲೀಟರ್‌ಗೆ ರೈತರಿಗೆ 34 ರೂ. ಹಾಗೂ ಸಹಕಾರ ಸಂಘಗಳಿಗೆ 35 ರೂ. ಸಿಗುತ್ತಿತ್ತು. ಮಾರುಕಟ್ಟೆಯಲ್ಲಿ ಅದನ್ನು 38 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈಗ ರೈತರಿಗೆ ನೀಡುವ ದರವನ್ನು 31.15 ರೂ.ಗೆ ಇಳಿಸಲಾಗಿದೆ. ಉಳಿದೆ ರಡು ಕಡೆ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿಲ್ಲ.
ಮೇಲಧಿಕಾರಿಗಳ ಸೂಚನೆ ಮೇರೆಗೆ ಇದನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬಮೂಲ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಗ್ರಾಮಾಂ ತರ ಮತ್ತು ರಾಮನಗರ ಸೇರಿ 3 ಜಿಲ್ಲೆಗಳು ಬರುತ್ತವೆ. 2,272 ಸಂಘಗಳಿದ್ದು, 2.10 ಲಕ್ಷ ರೈತರಿದ್ದಾರೆ. ನಿತ್ಯ ಇವರು ಬಮೂಲ್‌ಗೆ 16.25 ಲಕ್ಷ ಲೀ. ಹಾಲು ಪೂರೈಸುತ್ತಾರೆ. ಮಳೆ ಕೈಕೊಟ್ಟಿದ್ದರಿಂದ ಹೈನುಗಾರಿಕೆ ತುಸು ಕೈಹಿಡಿಯುತ್ತಿದೆ. ಈ ಮಧ್ಯೆ ಅದರ ಲಾಭಕ್ಕೂ ಕತ್ತರಿ ಹಾಕಿದ್ದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಹಿಂದಿನ ದರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಈ ಮೊದಲು ಪ್ರತಿ ಲೀಟರ್‌ಗೆ ನೀಡುತ್ತಿದ್ದ ದರ ತಾತ್ಕಾಲಿಕವಾಗಿತ್ತು. ನವೆಂ ಬರ್‌ಗಿಂತ ಮೊದಲು ಲೀಟರ್‌ಗೆ 29 ರೂ. ಪಾವತಿಸ ಲಾಗುತ್ತಿತ್ತು. ಸೀಜನ್ ಮುಗಿದ ನಂತರ ಅಂದರೆ ನವೆಂಬರ್‌ನಿಂದ ಮಾರ್ಚ್ ವರೆಗೆ 31.15 ರೂ.ಗೆ ಹೆಚ್ಚಿಸಲಾಯಿತು. ಬೇಸಿಗೆ ಕಾರಣಕ್ಕೆ ಏಪ್ರಿಲ್, ಮೇನಲ್ಲಿ 34 ರೂ. ನೀಡಲಾಗುತ್ತಿತ್ತು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದ ಅದೇ ದರವನ್ನು ಮತ್ತೂಂದು ತಿಂಗಳು (ಜೂನ್‌ಗೆ) ಮುಂದುವರಿಸ ಲಾಯಿತು. ಈಗ ಅನಿವಾರ್ಯವಾಗಿ ಹಿಂದಿನ ದರ ದಲ್ಲಿ ರೈತರಿಂದ ಖರೀದಿಸಲಾಗುತ್ತಿದೆ. ಅಷ್ಟಕ್ಕೂ ಪ್ರತಿ ವರ್ಷದ ಪ್ರಕ್ರಿಯೆ ಇದಾಗಿದೆ. ಒಕ್ಕೂಟದ ಲಾಭಾಂಶ ವನ್ನು ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈತರಿಗೆ ನೀಡಲಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಬಮೂಲ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ದರ ಕಡಿತ ಎಷ್ಟು ಸರಿ? : “ಮುಂಗಾರು ಶುರುವಾಯಿತು ಎಂಬ ಕಾರಣಕ್ಕೆ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತಗೊಳಿಸಲಾಗಿದೆ. ಆದರೆ, ವಾಸ್ತವವಾಗಿ ಮಳೆಯೇ ಇನ್ನೂ ಸರಿಯಾಗಿ ಆಗುತ್ತಿಲ್ಲ. ಬಿತ್ತನೆ ಕುಂಠಿತವಾಗಿದೆ. ಇದೇ ಸ್ಥಿತಿ ಮುಂದುವರಿದರೆ, ಮೇವಿಗೂ ತತ್ವಾರ ಉಂಟಾಗಬಹುದು. ಪರಿಸ್ಥಿತಿ ಹೀಗಿರುವಾಗ, ಏಕಾಏಕಿ ಪ್ರತಿ ಲೀಟರ್‌ಗೆ 2.85 ರೂ. ಕಡಿತಗೊಳಿಸಿರುವುದು ಎಷ್ಟು ಸರಿ? ಅಷ್ಟಕ್ಕೂ ಕೋಲಾರ ಮತ್ತಿತರ ಒಕ್ಕೂಟಗಳಲ್ಲೂ ಹೆಚ್ಚು-ಕಡಿಮೆ ಇದೇ ದರ ಇರುವುದನ್ನು ಕಾಣಬಹುದು’ ಎಂದು ಬೆಂಗಳೂರು ಗ್ರಾಮಾಂತರದ ರೈತ ಮಹೇಶ್ ತಿಳಿಸುತ್ತಾರೆ. ಈ ಬಗ್ಗೆ ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ. ಸುರೇಶ್ ಅವರನ್ನು ಕೇಳಿದಾಗ, “ನಾನು ಹೊರಗಡೆ ಇದ್ದೇನೆ. ಈ ಕುರಿತು ನನಗೆ ಮಾಹಿತಿ ಇಲ್ಲ’ ಎಂದಷ್ಟೇ ಹೇಳಿದರು.
ಹಾಲಿನ ಉತ್ಪಾದನೆ ಕುಸಿತ: ಏಪ್ರಿಲ್‌ನಲ್ಲಿ ನಿತ್ಯ ಬಮೂಲ್ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ 13 ಲಕ್ಷ ಲೀಟರ್ ಇತ್ತು. ಈಗ ತುಸು ಹೆಚ್ಚಳವಾಗಿದ್ದು, 16.25 ಲಕ್ಷ ಲೀಟರ್ ಪೂರೈಕೆ ಆಗುತ್ತಿದೆ. ಆದರೆ, ಹಿಂದಿನ ಮುಂಗಾರು ಸೀಜನ್‌ಗಳಿಗೆ ಹೋಲಿಸಿದರೆ ಇದು ಕಡಿಮೆಯೇ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ವಿಜಯಕುಮಾರ ಚಂದರಗಿ