Advertisement

ಕಳಲೆಯ ಕಹಳೆ

07:20 PM Jul 23, 2019 | mahesh |

ಆಷಾಡದ ಮಳೆ ಬಿದ್ದರೆ ಮಲೆನಾಡು ಮತ್ತು ಕರಾವಳಿಯ ಮನೆಗಳಲ್ಲಿ ಕಳಲೆ ಮತ್ತು ಕೆಸುವಿನ ಖಾದ್ಯಗಳ ಕಂಪು ಹರಡುತ್ತದೆ. ಧೋ ಎಂದು ಸುರಿಯುವ ಮಳೆ, ಚಳಿಗಾಳಿಯ ಶೀತವನ್ನು ಓಡಿಸಲು ಈ ಉಷ್ಣಕಾರಕ ಅಡುಗೆಗಳು ಸಹಕಾರಿ. ಇತ್ತೀಚೆಗೆ, ಸೂಪರ್‌ ಮಾರ್ಕೆಟ್‌ನಲ್ಲಿಯೂ ಈ ವಸ್ತುಗಳು ಸಿಗುವುದರಿಂದ, ಮಹಾನಗರದ ಜನರೂ ಮಳೆಗಾಲದಲ್ಲಿ ಕಳಲೆ-ಕೆಸು ಖಾದ್ಯಗಳನ್ನು ಸವಿಯಬಹುದು.

Advertisement

ಕಳಲೆ ಅಂದರೆ, ಬಿದಿರಿನ ಮೊಳಕೆ. ಈ ಮೊಳಕೆಯ ಹೊರ ಕವಚವನ್ನು ತೆಗೆದು, ಬಿಳಿಯ ತಿರುಳಿನ ಭಾಗವನ್ನು ಮಾತ್ರ ಅಹಾರವಾಗಿ ಬಳಸಬಹುದು. ಕಳಲೆಯನ್ನು ಬಳಸುವ ಮುನ್ನ, ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿ, ದಿನವೂ ನೀರನ್ನು ಬದಲಾಯಿಸಲು ಮರೆಯಬೇಡಿ. ಇಲ್ಲದಿದ್ದರೆ, ಕಳಲೆ ವಿಷವಾಗಿ ಪರಿಣಮಿಸಬಹುದು.

1. ಕಳಲೆ ಪಲ್ಯ
ಬೇಕಾಗುವ ಸಾಮಗ್ರಿ: ಸಣ್ಣದಾಗಿ ಹೆಚ್ಚಿದ ಕಳಲೆ, ಎಣ್ಣೆ, ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ,ಅರ್ಧ ಚಮಚ ಗರಂಮಸಾಲೆ.

ಮಾಡುವ ವಿಧಾನ: ಸಣ್ಣದಾಗಿ (ಉದ್ದಕೆ) ಹೆಚ್ಚಿದ ಕಳಲೆಯನ್ನು ಕುಕ್ಕರ್‌ನ ಪಾತ್ರೆಯಲ್ಲಿಟ್ಟು ಎರಡರಿಂದ ಮೂರು ವಿಷಲ್‌ ಬರಿಸಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಬೇಕಿದ್ದರೆ ಈ ಒಗ್ಗರಣೆಗೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ನಂತರ, ಬೇಯಿಸಿಟ್ಟಿದ್ದ ಕಳಲೆಯನ್ನು ಹಾಕಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ,ಅರ್ಧ ಚಮಚ ಗರಂಮಸಾಲೆ ಸೇರಿಸಿ ಐದು ನಿಮಿಷಗಳ ಕಾಲ ಬೇಯಿಸಿದರೆ ಪಲ್ಯ ರೆಡಿ.

2. ಕಳಲೆ ಬೊಂಡಾ
ಬೇಕಾಗುವ ಸಾಮಗ್ರಿ: ಕಳಲೆ, ಕಡಲೆಹಿಟ್ಟು   -ಒಂದು ಕಪ್‌, ಖಾರದ ಪುಡಿ, ಉಪ್ಪು, ಚಿಟಿಕೆ ಸೋಡಾ, ಜೀರಿಗೆ ಪುಡಿ- ಅರ್ಧ ಚಮಚ, ಎಣ್ಣೆ.

Advertisement

ಮಾಡುವ ವಿಧಾನ: ಕಳಲೆಯನ್ನು ಚಕ್ರಾಕರವಾಗಿ ಕತ್ತರಿಸಿ ನೀರಿನಲ್ಲಿ ನೆನೆಸಿಡಿ. ಕಡಲೆಹಿಟ್ಟು , ಖಾರದ ಪುಡಿ, ಉಪ್ಪು, ಚಿಟಿಕೆ ಸೋಡಾ, ಜೀರಿಗೆ ಪುಡಿ ಹಾಗೂ ನೀರನ್ನು ಹಾಕಿ ಬೊಂಡಾ ಹಿಟ್ಟನ್ನು ತಯಾರಿಸಿಕೊಳ್ಳಿ. ಈ ಹಿಟ್ಟಿಗೆ ಕಳಲೆಯನ್ನು ಅದ್ದಿ, ಕೆಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.
3. ಕೆಸುವಿನ ಎಲೆಯ ಗೊಜ್ಜು

ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ- 15, ಎಣ್ಣೆ, ಒಣಮೆಣಸಿನ ಕಾಯಿ- 4, ಉದ್ದಿನ ಬೇಳೆ- ಒಂದೂವರೆ ಚಮಚ, ಬೆಲ್ಲ, ಉಪ್ಪು, ಹುಣಸೆ ರಸ, ಇಂಗು, ಸಾಸಿವೆ.

ಮಾಡುವ ವಿಧಾನ: ಕೆಸುವಿನ ಎಲೆಗಳನ್ನು ತೊಳೆದು, ನೀರು ಹಾಕಿ ಚೆನ್ನಾಗಿ ಬೇಯಿಸಿ. ಸೊಪ್ಪು ಬೆಂದ ನಂತರ ಉಳಿದ ನೀರನ್ನು ಬಸಿಯಿರಿ. ಬಾಣಲೆಯಲ್ಲಿ ಎಣ್ಣೆ, ಒಣಮೆಣಸಿನ ಕಾಯಿ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿಯಿರಿ. ನಂತರ, ಬೇಯಿಸಿದ ಕೆಸುವಿನ ಎಲೆ, ಹುರಿದ ಪದಾರ್ಥ, ಬೆಲ್ಲ,ಉಪ್ಪು, ಹುಣಸೆ ರಸ, ಇಂಗು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಎಣ್ಣೆ ಹಾಕಿ ಸಿಡಿದ ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವರೆಗೆ ಮಗುಚಿ. (ಬೇಕಿದ್ದರೆ ಬೆಳ್ಳುಳ್ಳಿಯನ್ನೂ ಸೇರಿಸಬಹುದು)

4. ಕೆಸುವಿನ ನಿಣೆ (ಪತ್ರೊಡೆ ನಿಣೆ)
ಬೇಕಾಗುವ ಸಾಮಗ್ರಿ: ಅಕ್ಕಿ – ಒಂದೂವರೆ ಕಪ್‌, ತೊಗರಿ ಬೇಳೆ- ಕಾಲು ಕಪ್‌, ಧನಿಯಾ, ಜೀರಿಗೆ, ಒಣಮೆಣಸಿನ ಕಾಯಿ, ಮೆಂತ್ಯೆ - ರುಚಿಗೆ ಬೇಕಾದಷ್ಟು, ಕೆಸುವಿನ ಎಲೆ.

ಮಾಡುವ ವಿಧಾನ: ಅಕ್ಕಿ, ತೊಗರಿ ಬೇಳೆ, ಧನಿಯಾ, ಜೀರಿಗೆ, ಒಣಮೆಣಸಿನ ಕಾಯಿ ಹಾಗೂ ಮೆಂತ್ಯೆಯನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿಟ್ಟು, ನಂತರ ಇಡ್ಲಿ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ. ಕೆಸುವಿನ ಎಲೆಗಳನ್ನು ತೊಳೆದು, ಒರೆಸಿ ಅಡಿ ಮೇಲಾಗಿಟ್ಟು ರುಬ್ಬಿದ ಹಿಟ್ಟನ್ನು ಒಂದು ಪದರ ಕೆಳಮುಖವಾಗಿ ಎಲೆಗೆ ಸವರಿ. ಇನ್ನೊಂದು ಎಲೆಯನ್ನು ಇಟ್ಟು ಹೀಗೇ ಮಾಡಿ. ಹೀಗೆ ನಾಲ್ಕು ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು, ರುಬ್ಬಿದ ಹಿಟ್ಟನ್ನು ಹಾಕಿ ತೆಳುವಾಗಿ ಸವರಿ. ಎಲೆಗಳನ್ನು ಎಡ-ಬಲ ಮಡಚಿ ಎಲೆಯ ಕೆಳಭಾಗದಿಂದ ಮೇಲು¤ದಿಯವರೆಗೆ ಸುರುಳಿ ಸುತ್ತಿ ಮಡಚಿ.

ಇಡ್ಲಿ ಪಾತ್ರೆಗೆ ನೀರು ಹಾಕಿ, ತಟ್ಟೆಯನ್ನಿಟ್ಟು ಅದರ ಮೇಲೆ ಈ ಸುತ್ತಿದ ಮಸಾಲೆ ಸುರುಳಿಗಳನ್ನು ಒಂದರ ಮೇಲೊಂದು ಇಟ್ಟು ಅರ್ಧ ಗಂಟೆ ಬೇಯಿಸಿ, ಕತ್ತರಿಸಿ. ಇದು ಪತ್ರೊಡೆ ನಿಣೆ. ಇದು ಉಷ್ಣಕಾರಿ ಆಗಿರುವುದರಿಂದ ಬೆಣ್ಣೆಯೊಂದಿಗೆ ತಿಂದರೆ ಒಳ್ಳೆಯದು. ಕೊಬ್ಬರಿ ಎಣ್ಣೆಯೊಂದಿಗೂ ಸವಿಯಬಹುದು.

-ವೇದಾವತಿ ಎಚ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next