Advertisement

ಬಿದಿರು ಕೊಳಲಾದದ್ದು !

06:00 AM Sep 02, 2018 | |

ನಾನು ಒಂದು ಬಿದಿರಿನ ಗಿಡ
ಹುಲ್ಲು ಅಥವಾ ದೊಡ್ಡ ಹುಲ್ಲು ಎಂದರೂ ಸರಿಯೆ
ನನಗೆ ಟೊಂಗೆ ರೆಂಬೆಗಳಿಲ್ಲ.
ಹಾಗಾಗಿ ನಾನು ಉದ್ದನೆಯ ಒಂದು ಕೋಲು
ಮೈತುಂಬ ಇರುವ ಅವಕಾಶದಲ್ಲೂ ಚುಚ್ಚುವ ಮುಳ್ಳು.
ಹೀಗಾಗಿ ನಾನು ಯಾರಿಗೂ ಒಂದು ನೆರಳಾಗಲಿಲ್ಲ
ಹಣ್ಣು ಕೊಡುವ ಮರವಾಗಲಿಲ್ಲ
ಅಥವಾ ಕಡಿದುರುಳಿದ ಬಳಿಕ ಆಸನ ಉಪಕರಣ ಆಗಲಿಲ್ಲ
ನಾನು ಬದುಕಿರುವಾಗ ಏನೂ ಆಗಲಿಲ್ಲ
ಕನಿಷ್ಠ ಸತ್ತ ಬಳಿಕದ ಉರುವಲೂ ಆಗಲಿಲ್ಲ
ಅಪಶಕುನದ ಭಯಕ್ಕೆ ನನ್ನನ್ನು ಸುಡುವವರೂ ಇಲ್ಲ
ಅಲ್ಲೊಮ್ಮೆ ಇಲ್ಲೊಮ್ಮೆ ಏಣಿಯಾಗಿದ್ದೇನೆ
ಏರಿದವರು ಮರೆತುಬಿಟ್ಟಿದ್ದಾರೆ ಏರಿದಾಕ್ಷಣ.
ಬಹಳಷ್ಟು ಜನ ನನ್ನ ನೆನೆಯುವುದು ಸತ್ತಾಗ
ಸತ್ತ ಹೆಣ ಹೊರುವ ಚಟ್ಟಕ್ಕೆ
ಚಟ್ಟಕ್ಕಾದರೂ ಎಷ್ಟು ಆಯುಸ್ಸು? ಹೆಣದ ಜತೆಗೆ ಅದೂ ಬೂದಿ
ನನಗೆ ನಾನು ಏನೂ ಆಗಲಿಲ್ಲ ಎಂಬ ಕೊರಗು ಉಳಿಯಿತು.
ನಾನು ಒಳಗೇ ನರಳಿದೆ, ಕೊರಗಿದೆ
ನನ್ನ ಉಸಿರಿಗೆಲ್ಲ ಒಂದೇ ಹಸಿವು
ನಾನು ಸತ್ತ ಬಳಿಕವೂ ಉಳಿಯಬೇಕು
ಸಾಯದಂತೆ ಉಳಿಯಬೇಕು
ನನ್ನ ಒಳಗೆ ಏನೂ ಆಗದ ಒಂದು  ಪೊಳ್ಳುತನ
ಹಾಗಾಗಿ ಕಾಂಡದ ಒಳಗೆ ಒಂದು ಖಾಲಿ ಅವಕಾಶ
ನಾನು ಒಳಗೆ ಖಾಲಿ, ಹೊರಗೆ ಬರಿಯ ಸಿಪ್ಪೆ
ಅದರೊಳಗೆಲ್ಲ ಬದುಕಲೇ ಬೇಕು ಎಂಬ ಹಸಿವಿನ ಉಸಿರು
ಅದೊಂದನ್ನೇ ನಿತ್ಯ ಮಂತ್ರಿಸುತ್ತಿದ್ದೆ
ಉಸಿರೆಲ್ಲ ಸತ್ತ ಬಳಿಕವೂ ಬದುಕುವ ಪ್ರಾಣಾಯಾಮ
ಒಳಗೆಲ್ಲ ಓಡಾಡುತ್ತಿತ್ತು
.
.
ದುಂಬಿ ಮೈತುಂಬ ರಂಧ್ರ ಕೊರೆಯಿತು.
ನಾನು ಅದರ ಒತ್ತಡಕ್ಕೆ ಮುರಿದು ನೆಲಕ್ಕೆ ಬಿದ್ದೆ
ಒಳಗೆ ಹರಿಯುವ ಉಸಿರಿಗೆ ಜೀವವಿತ್ತು
ಅದು ಒಂದೇ ಸಮನೆ ಬದುಕುವ ಮಾತು ಹೇಳುತ್ತಿತ್ತು
ಅಷ್ಟರಲ್ಲಿ ಯಾರೋ ಒಬ್ಬ ದನಕಾಯುವವ
ಆ ದಾರಿಯಲ್ಲಿ ಸಾಗಿದ, ನನಗೆ ಅವನ ಕಾಲು ತಾಗಿತು
ಅವನು ಥಟ್ಟಂತ ಕಾಲು ಹಿಂದಕ್ಕೆಳೆದ.
ಅವನು ಸಾಮಾನ್ಯ ದನ ಕಾಯುವವನಲ್ಲ , ಶ್ರೀಕೃಷ್ಣ.
ಅವನಿಗೆ ನನ್ನ ಒಳಗಿನ ಉಸಿರು ತಾಕಿರಬೇಕು
ಅದಕ್ಕೆ ಕಾಲಿನಿಂದ ಒದೆದು ಹೋಗಲಿಲ್ಲ
ಮೆತ್ತಗೆ ನನ್ನ ಕಡೆಗೆ ಬಾಗಿದ
ತನ್ನ ಕೈಯಿಂದ ನನ್ನನ್ನು ಎತ್ತಿಕೊಂಡ
ತನ್ನ ಕೈಯಳತೆ ನನ್ನನ್ನು ಮುರಿದ
ಅದೊಂದು ಸುಂದರ ವೇದನೆ, ಅಪೇಕ್ಷಿತ ನೋವಿನ ಹಾಗೆ
ಅಷ್ಟಕ್ಕೆ ನಿಲ್ಲಲಿಲ್ಲ ಅವನು
ಇರುವ ಐದಾರು ರಂಧ್ರಗಳಲ್ಲಿ ಒಂದಕ್ಕೆ ತನ್ನ ತುಟಿ ಹಚ್ಚಿದ
ಅಬ್ಟಾ ! ಅದೆಂಥ ಕೃಪೆ ! ಅದು ಮುತ್ತಲ್ಲ
ಪಂಚಪ್ರಾಣವನ್ನು ನನ್ನೊಳಗೆ ನೂಕಿಬಿಟ್ಟ
ಓಹ್‌! ನನ್ನೊಳಗೆ ಕೋಲಾಹಲ
ಒಳಗೆ ಬದುಕಬೇಕು ಎಂದು ಹಸಿದ ಉಸಿರಿಗೆ ಅವನ ಉಸಿರು ಕೂಡಿತು
ಎರಡರೊಳಗೆ ಒಂದು ಸಮಪಾಕದ ಹಸಿಬಿಸಿ ಬೆಸೆತ
ನಾನು ರುಮುರುಮು ಒಳಗೆ ಬೀಸಿ ಹೊರಗೆ ನೂಕುವಂತಾದೆ
ಇನ್ನೇನು ಜೀವದ ಆರ್ಭಟ ಗಾಳಿಯಾಗಿ ರಭಸ ಪಡೆದಿತ್ತು
ಅದು ಹಾಗೆ ಭರ್ರಂತ ಉಳಿದ ರಂಧ್ರಗಳಲ್ಲಿ ಬಿರುಗಾಳಿಯಾಗಿ ಆರ್ಭಟಿಸಲಿಕ್ಕಿತ್ತು
ಅಷ್ಟರಲ್ಲಿ ಕೃಷ್ಣ…
ತನ್ನ ಎರಡು ಬೆರಳುಗಳಿಂದ ಎರಡು ರಂಧ್ರಗಳನ್ನು ಮುಚ್ಚಿದ
ಹೊರಗೆ ಹೊರಟ ಜೀವದ ನೂಕಿಗೆ ಪಾಕಮಾಡಿ ಹೊಸ ಮಾರ್ಗ ತೋರು
ನಿಧಾನಕ್ಕೆ ಎರಡು ರಂಧ್ರಗಳಲ್ಲಿ ಸಾಂದ್ರವಾಗಿ ಹರಿಯಬಿಟ್ಟ
ಅದು ಹರಿಬಿಟ್ಟ ನಾದವಾಯಿತು
ನಾನು ಆರ್ಭಟವಾಗಬೇಕಾದವನು ಸುಂದರ ನಿನಾದವಾದೆ.
ದನಿಯ ನೂಕಿಗೆ ಸ್ವರ ಕೊಟ್ಟ ಕೊಳಲಾದೆ
ಬರಿಯ ಕೊಳಲಾಗಲಿಲ್ಲ ಕೃಷ್ಣನ ಕೈಯ ಕೊಳಲಾದೆ
ಅವನ ತುಟಿಯ ಸ್ಪರ್ಶಕೆ ಮರುಜೀವ ಪಡೆದೆ
ಎಂದೂ ಸಾಯದಂತೆ ಉಳಿದೆ, ಬದುಕಿದೆ.

Advertisement

ವೀಣಾ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next