ಕರಾಚಿ: ಜಮ್ಮು-ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಹೆಸರಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ಥಾನದಲ್ಲೇ ಈಗ ರಕ್ತ ಪಾತವಾಗುತ್ತಿದೆ. ಅಲ್ಲಿನ ಬಲೂಚಿಸ್ಥಾನದಲ್ಲಿ ಸ್ವಾತಂತ್ರ್ಯದ ಕಿಚ್ಚು ವ್ಯಾಪಿಸಿದ್ದು, ವಿವಿಧ ಸ್ಥಳಗಳಲ್ಲಿ ಸರಣಿ ವಿಧ್ವಂಸಕ ಕೃತ್ಯಗಳು ನಡೆದಿವೆ.
ಬಲೂಚಿಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಬಲೂಚಿಸ್ಥಾನ ಲಿಬರೇಶನ್ ಆರ್ಮಿ (ಬಿಎಲ್‌ಎ) ಸೋಮವಾರ ಪಾಕಿಸ್ಥಾನದ 102 ಸೈನಿಕರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿದೆ. ಸಂಘಟನೆಯ “ಮಜೀದ್ ಬ್ರಿಗೇಡ್’ ಸದಸ್ಯರು ಸೋಮವಾರ ಬಲೂಚಿಸ್ಥಾನದ ಬೇಲಾ ಎಂಬಲ್ಲಿ ಪಾಕಿಸ್ಥಾನದ ಸೇನಾ ಕ್ಯಾಂಪ್‌ಗೆ ನುಗ್ಗಿ ದಾಂಧಲೆ ನಡೆಸಿದೆ. ಒಟ್ಟು 6 ತಾಸುಗಳ ಕಾಲ ದಾಳಿ ನಡೆಸಿದ್ದು,”ಆಪರೇಶನ್ ಹೆರಾಫ್’ ಅನ್ವಯ ಈ ಕಾರ್ಯಾಚರಣೆ ನಡೆಸಿರುವುದಾಗಿ ಸಂಘಟನೆ ಹೇಳಿದೆ. ಆದರೆ ಪಾಕಿಸ್ಥಾನ ಸರಕಾರವು ಒಟ್ಟು 40 ಸೈನಿಕರು ಹತರಾಗಿದ್ದಾರೆ ಎಂದು ಹೇಳಿಕೊಂಡಿದೆ.
ಮೊದಲಿಗೆ ಬಿಎಲ್‌ಎಯ ಇಬ್ಬರು ಸದಸ್ಯರು ಸ್ಫೋಟಕಗಳನ್ನು ತುಂಬಿರುವ ವಾಹನಗಳನ್ನು ಚಲಾಯಿಸಿಕೊಂಡು ಬಂದು ಸೇನಾ ಕ್ಯಾಂಪ್‌ನ ಮುಖ್ಯ ಗೇಟ್‌ಗೆ ನುಗ್ಗಿಸಿದರು. ಬಳಿಕ ಸೇನಾ ಕ್ಯಾಂಪ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದು ಸಂಘಟನೆ ಘೋಷಿಸಿದೆ. ಪಾಕ್ ಸೇನೆ ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿ ಒಟ್ಟು 21 ಮಂದಿಯನ್ನು ಕೊಂದಿರುವುದಾಗಿ ಹೇಳಿದೆ.
ಮುಸಾಖೇಲ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಹೆದ್ದಾರಿಯಲ್ಲಿ ಬಸ್ ಅನ್ನು ತಡೆದು ನಿಲ್ಲಿಸಿ, ಒಳಗಿದ್ದವರನ್ನು ಕೆಳಕ್ಕೆ ಇಳಿಸಿ, ಅವರ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಗುಂಡು ಹಾರಿಸಿ 23 ಮಂದಿಯನ್ನು ಹತ್ಯೆಗೈದಿದ್ದಾರೆ. 10 ಮಂದಿ ಬಂದೂಕುಧಾರಿಗಳು ರಸ್ತೆಯನ್ನು ಅಡ್ಡಗಟ್ಟಿ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ 10ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮುಸಾಖೇಲ್ ಜಿಲ್ಲೆ ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ 450 ಕಿ.ಮೀ. ದೂರದಲ್ಲಿದೆ. ಮೃತ ಬಸ್ ಪ್ರಯಾಣಿಕರಲ್ಲಿ ಇಬ್ಬರು ಅರೆಸೇನಾ ಪಡೆ ಯೋಧರಾಗಿದ್ದು, ಉಳಿದವರು ನಾಗರಿಕರು ಎಂದು ಪಾಕ್ ಸರಕಾರ ಹೇಳಿದೆ. ಆದರೆ ಬಸ್‌ನಲ್ಲಿದ್ದ ಎಲ್ಲರೂ ಸಿವಿಲ್ ಉಡುಗೆ ಧರಿಸಿದ್ದ ಪಾಕ್ ಸೈನಿಕರೇ ಆಗಿದ್ದು, ಗುರುತಿನ ಚೀಟಿ ಪರಿಶೀಲಿಸಿಯೇ ಕೊಂದಿದ್ದೇವೆ ಎಂದು ಬಲೂಚಿಸ್ಥಾನ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.
ಮತ್ತೊಂದು ಘಟನೆಯಲ್ಲಿ ಕಲಾತ್ ಎಂಬಲ್ಲಿ ಶಸ್ತ್ರಸಜ್ಜಿತ ಉಗ್ರರು ಐವರು ನಾಗರಿಕರು, 6 ಮಂದಿ ಸೈನಿಕರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪಾಕಿಸ್ಥಾನದ ಜಿಯೋ ಸುದ್ದಿ ವಾಹಿನಿ ವರದಿ ಮಾಡಿರುವ ಪ್ರಕಾರ ಆ. 24ರಿಂದಲೇ ಬಲೂಚಿಸ್ಥಾನದ ವಿವಿಧ ಪ್ರದೇಶಗಳಲ್ಲಿ ಗ್ರೆನೇಡ್ ಎಸೆತ, ಗುಂಡು ಹಾರಾಟ ಸಹಿತ ಹಲವು ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು 6 ಮಂದಿ ಯನ್ನು ಗುಂಡು ಹಾರಿಸಿ ಕೊಂದಿದ್ದರು. 2015ರಲ್ಲಿ ತುಬ್ರತ್ ಎಂಬ ಪ್ರದೇಶದಲ್ಲಿ 20 ಮಂದಿ ಕಟ್ಟಡ ನಿರ್ಮಾಣ ಕೆಲಸ ಗಾರರನ್ನು ಅಪರಿಚಿತ ಬಂದೂಕುಧಾರಿಗಳು ಕೊಂದಿದ್ದರು.
ಖಂಡನೆ: ಪಾಕಿಸ್ಥಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್ ಸಹಿತ ಪ್ರಮುಖರು ಈ ದಾಳಿಗಳನ್ನು ಖಂಡಿಸಿದ್ದಾರೆ. ಜತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸುವುದಾಗಿಯೂ ಹೇಳಿದ್ದಾರೆ.
40 ಮಂದಿಯ ಹತ್ಯೆ
ಮತ್ತೂಂದೆಡೆ, ಸೋಮವಾರವೇ 2 ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 40 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ.