ಬಳ್ಳಾರಿ : ತಾಳೂರು ರಸ್ತೆಯ ರೇಣುಕಾ ನಗರದಲ್ಲಿ ಒಳಚರಂಡಿಯ ದುರಾವಸ್ಥೆ ಸರಿಪಡಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಪಾಲಿಕೆ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ನಗರದ ತಾಳೂರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು.
ರೇಣುಕಾ ನಗರದ 7 ರಿಂದ 12ನೇ ಕ್ರಾಸ್ ವರೆಗೆ ಇರುವ ಒಳ ಚರಂಡಿ ವ್ಯವಸ್ಥೆ ಹಾಳಾಗಿದೆ. ಪದೇ ಪದೇ ಚರಂಡಿ ತುಂಬಿ ಕೊಚ್ಚೆ ನೀರು ರಸ್ತೆ ಮೇಲೆ ಹರಿದು ಅವಾಂತರ ಸೃಷ್ಟಿಸುತ್ತದೆ. ಇದರ ದುರ್ವಾಸನೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ ಮತ್ತು ಮಲಿನ ನೀರಿನಲ್ಲಿಯೇ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಸರಿಪಡಿಸುವಂತೆ ಹತ್ತಾರು ಬಾರಿ ಸಂಬಂಧಪಟ್ಟ ಪಾಲಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ವತಃ ಪಾಲಿಕೆ ಆಯುಕ್ತರೇ ಸ್ಥಳಕ್ಕೆ ಬಂದು ಈ ದುರಾವಸ್ಥೆಯನ್ನು ನೋಡಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 1076 ಪಾಸಿಟಿವ್ ಪ್ರಕರಣ|1136 ಸೋಂಕಿತರು ಗುಣಮುಖ
ಪರಿಣಾಮ ಆಗೊಮ್ಮೆ ಈಗೊಮ್ಮೆ ಪಾಲಿಕೆ ಸಿಬ್ಬಂದಿ ಬಂದು ಚರಂಡಿ ತುಂಬಿ ತುಳುಕುವಾಗ ಆ ನೀರನ್ನು ಪಂಪ್ ಮಾಡಿ ಹೋಗುತ್ತಾರೆ ವಿನಃ ಇದಕ್ಕೆ ಶಾಶ್ವತ ಪರಿಹಾರ ಮಾಡುತ್ತಿಲ್ಲ ಎಂದು ಪ್ರತಿಭಟನಾ ನಿರತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಪಾಲಿಕೆ ಆಯುಕ್ತರ ಬಳಿ ತೆರಳಿ ಕೇಳಿದರೆ ಅವರು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇಂಥ ಆಯುಕ್ತರು ನಮಗೆ ಬೇಡ ವರ್ಗಾವಣೆ ಮಾಡಿ ಎಂದು ಜನತೆ ರಸ್ತೆಯಲ್ಲಿ ಕುಳಿತು ಪ್ರದರ್ಶನ ಫಲಕ ಹಿಡಿದು ಘೋಷಣೆ ಕೂಗಿದರು.
ಸಂಪೂರ್ಣ ರಸ್ತೆಯನ್ನು ಬಂದ್ ಮಾಡಿದ್ದರಿಂದ ಬೆಳಗ್ಗೆಯೇ ಶಾಲೆಗೆ ಬಸ್ ಗಳು ಸೇರಿದಂತೆ ಲಾರಿ ಮೊದಲಾದ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಸ್ವತಃ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗುಡಿಗಂಟಿದನ ಶ್ರೀಮಂತ, ಕೆ. ಹನುಮಂತ, ಸ್ಥಳೀಯ ಮುಖಂಡ ಡಿಶ್ ಉಮೇಶ್, ಗುರು, ಗಂಗೀರೆಡ್ಡಿ ಮೊದಲಾದವರು ಪಾಲ್ಗೊಂಡು ಜನರ ಹೋರಾಟಕ್ಕೆ ಬೆಂಬಲ ನೀಡಿದ್ದರು.
ಪೊಲೀಸರು ಬಂದು ರಸ್ತೆ ಬಂದ್ ಮಾಡದಂತೆ ಮನವಿ ಮಾಡಿದರು. ಆದರೆ ಚರಂಡಿ ಸಮಸ್ಯೆಯಿಂದಾಗಿ ಬೇಸತ್ತಿದ್ದ ಜನ ಪೊಲೀಸರ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ : ಅನುಶ್ರಿ ಹೆಸರು ಕೈಬಿಟ್ಟಿರೋದರ ಹಿಂದೆ ಪ್ರಭಾವ ಇದೆ ಅಂತ ನನಗನ್ನಿಸಲ್ಲ : ಸಚಿವ ಮಾಧುಸ್ವಾಮಿ