ಹಗರಿಬೊಮ್ಮನಹಳ್ಳಿ: ಕ್ಷೇತ್ರದ 18ರಿಂದ 44ವರ್ಷದ ಒಟ್ಟು 12ಸಾವಿರ ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಜೂ. 21ರಂದು ಸೋಮವಾರ ಹಾಕಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ತಿಳಿಸಿದರು. ಪಟ್ಟಣದ ಸರ್ಕ್ನೂಟ್ ಹೌಸ್‌ನಲ್ಲಿ ನಡೆದ ಮೆಗಾ ಲಸಿಕೆ ಅಭಿಯಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶದ 8ಸಾವಿರ ಜನರಿಗೆ ಮತ್ತು ಪುರಸಭೆ ವ್ಯಾಪ್ತಿಯ 2ಸಾವಿರ ಜನರಿಗೆ ಲಸಿಕೆ ಹಾಕಲಾಗುವುದು. ತಾಲೂಕಿನ ತಂಬ್ರಹಳ್ಳಿ, ಮೋರಿಗೇರಿ, ಮಗಿಮಾವಿನಹಳ್ಳಿ, ಉಪನಾಯಕನಹಳ್ಳಿ, ಮರಬ್ಬಿಹಾಳು ಸೇರಿ ಒಟ್ಟು 47 ಕಡೆಗಳಲ್ಲಿ ಕೇಂದ್ರ ಆರಂಭಿಸಲಾಗಿದೆ.
ಕ್ಷೇತ್ರದ ಮರಿಯಮ್ಮನಹಳ್ಳಿ ಮತ್ತು ಕೊಟ್ಟೂರು ಸೇರಿ ಹಲವೆಡೆ ಏಕಕಾಲಕ್ಕೆ ಲಸಿಕೆ ಅಭಿಯಾನ ಆರಂಭವಾಗಲಿದೆ. ಜಿಲ್ಲಾ ಧಿಕಾರಿಗಳು ಮತ್ತು ಉಸ್ತುವಾರಿ ಸಚಿವರನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ತಾಲೂಕಿಗೆ ಲಸಿಕೆ ಅಭಿಯಾನದಲ್ಲಿ ಪ್ರಾಶಸ್ತ ಒದಗಿದೆ. ಒಟ್ಟು 12ಸಾವಿರ ಜನರಿಗೆ ಲಸಿಕೆ ಒದಗಿದ ಬಳಿಕ ಪುನಃ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಉಳಿದವರಿಗೂ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಮೊದಲ ಡೋಸ್ ಲಸಿಕೆ ಪಡೆದ 84 ದಿನಗಳ ಬಳಿಕ 2ನೇ ಡೋಸ್ ಲಸಿಕೆ ಒದಗಿಸಲಾಗುವುದು. ಕ್ಷೇತ್ರವನ್ನು ಕೊರೊನಾ ಮುಕ್ತವಾಗಿಸಲು ನಿರಂತರವಾಗಿ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ಶ್ರಮಿಸುತ್ತಿದ್ದೇವೆ. ಪ್ರತಿಯೊಬ್ಬರು ಲಸಿಕೆ ಪಡೆದು ಕೊರೊನಾವನ್ನು ಹಿಮ್ಮೆಟ್ಟೋಣ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಡಾ| ಶಿವರಾಜ, ಪಿಡಬ್ಲೂಡಿ ಎಇಇ ಪ್ರಭಾಕರ ಶೆಟ್ರಾ ಇತರರಿದ್ದರು.