ಸಿರುಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಶನಿವಾರ ಬಾಗಿನ ಸಮರ್ಪಿಸಿದರು.
ನಂತರ ಮಾತನಾಡಿದ ಶಾಸಕರುಞ ದೇಶಕ್ಕೆ, ನಾಡಿಗೆ ಉತ್ತಮ ಮಳೆ, ಬೆಳೆ ಬರಬೇಕೆನ್ನುವ ಉದ್ದೇಶದಿಂದ ಗಂಗೆಗೆ ಬಾಗಿನ ಅರ್ಪಿಸಲಾಗುತ್ತದೆ. ಆದರೆ ಈ ವರ್ಷ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವರುಣನ ಪ್ರತಾಪದಿಂದ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ.
ನಿರಾಶ್ರಿತರ ನೆರವಿಗೆ ಪ್ರತಿಯೊಬ್ಬರು ತಮ್ಮ ಕೈಲಾದ ಸಹಾಯ ಸಹಕಾರವನ್ನು ಸಾರ್ವಜನಿಕರು ನೀಡಿದರೆ ನಿರಾಶ್ರಿತರಿಗೆ ಅನುಕೂಲವಾಗುತ್ತದೆ. ನಮ್ಮ ಭಾಗದ ತುಂಗಭದ್ರಾ ಜಲಾಶಯ ಈ ವರ್ಷ ಭರ್ತಿಯಾಗುತ್ತದೋ ಇಲ್ಲವೋ ಎನ್ನುವ ಆತಂಕ ರೈತರನ್ನು ಕಾಡುತಿತ್ತು.
ಆದರೆ ದೇವರು ಕಣ್ಣುತೆರೆದಿದ್ದು, ಜಲಾಶಯ ಭರ್ತಿಯಾಗಿದೆ. ಇನ್ನೂ ಜಿಲ್ಲೆಯ ರೈತರಿಗೆ ಯಾವುದೇ ರೀತಿಯಲ್ಲಿ ಕೃಷಿಗೆ ನೀರಿನ ತೊಂದರೆಯಾಗದಂತೆ ಅ ಧಿಕಾರಿಗಳು ನೀರನ್ನು ಹರಿಸಬೇಕೆಂದು ಇನ್ನು ಮುಂದೆ ತಾಲೂಕಿನಲ್ಲಿ ಕೃಷಿ ಚಟುವಟಿಕೆ ನಡೆಯಲಿದ್ದು, ಕೃಷಿ ಕಾರ್ಮಿಕರಿಗೆ ಕೆಲಸ ಕಾರ್ಯಗಳು ದೊರೆಯಲಿವೆ.
ಇದರಿಂದ ಮಹಾನಗರಗಳಿಗೆ ಕೆಲಸ ಅರಸಿ ಗುಳೇ ಹೋಗುವುದು ತಪ್ಪುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ, ಸಿಪಿಐ ಟಿ.ಆರ್.ಪವಾರ್ ಮತ್ತು ಮುಖಂಡರು ಇದ್ದರು.