ಕೋವಿಡ್ 2ನೇ ಅಲೆ ತಡೆಗೆ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ತಾಲೂಕಿನಲ್ಲಿ ಕುಂಬಾರ ವೃತ್ತಿಯನ್ನು ನಂಬಿಕೊಂಡಿರುವ ನೂರಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಕುಂಬಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ನೂರಾರು ಕುಟುಂಬಗಳು ಜೀವನ ನಿರ್ವಹಿಸಲು ಒದ್ದಾಡುತ್ತಿವೆ.
ಈಗ ತಾಲೂಕಿನಲ್ಲಿ ಲಾಕ್‌ಡೌನ್ ಮುಂದುವರೆದಿರುವುದರಿಂದ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಜನ ಕುಂಬಾರಿಕೆಯನ್ನೇ ನೆಚ್ಚಿಕೊಂಡಿವೆ. ಲಾಕ್‌ಡೌನ್ ಜಾರಿಯಾದ ನಂತರ ಕುಂಬಾರರ ಬೀದಿಗೆ ಬಂದು ಮಡಿಕೆ ಖರೀದಿಸುವವರು ಯಾರು ಸುಳಿದಿಲ್ಲ. ತಯಾರಿಸಿದ ಮಡಿಕೆ, ಕುಡಿಕೆಗಳು ಮನೆಯೊಳಗೆ ರಾಶಿಬಿದ್ದಿವೆ. ಮುಂಜಾನೆ ಎದ್ದು ಖಾಸಗಿ ಜಮೀನುಗಳಲ್ಲಿ ಒಂದು ಟನ್ ಮಣ್ಣಿಗೆ 400 ರೂ.ಕೊಟ್ಟು, ಮನೆಗೆ ತಂದು ಮಡಿಕೆ ತಯಾರಿಸುತ್ತಾರೆ.
ಹೆಚ್ಚಾಗಿ ಮಡಕೆ, ಹರವಿ, ದನಕರುಗಳಿಗೆ ನೀರು ಕುಡಿಸಲು ತಲಗಟ್ಟು, ಒಲೆಗಳು ಹೀಗೆ ವಿವಿಧ ಆಕಾರದ ಮಣ್ಣಿನ ಪಾತ್ರೆಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸ ಪಾರಂಪರಿಕವಾಗಿ ಮಾಡುತ್ತಾ ಬಂದಿದ್ದಾರೆ. ಹಬ್ಬ ಹರಿದಿನಗಳಿಗೆ ಮಡಿಕೆ ಮತ್ತು ಹರವಿ ಬಳಸುವುದುಂಟು, ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಗೃಹ ಪ್ರವೇಶಗಳು ಹೆಚ್ಚು ನಡೆಯುವುದರಿಂದ ಮಣ್ಣಿನ ಮಡಿಕೆ ಸೇರಿದಂತೆ ಇತರೆ ವಸ್ತುಗಳಿಗೆ ಬೇಡಿಕೆ ಇರುತ್ತದೆ. ಈಗ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ಖರೀದಿಸುವವರು ಇಲ್ಲದಂತಾಗಿದೆ.
ಗೌರಿ ಗಣೇಶ ಮತ್ತು ಮೊಹರಂ ಹಬ್ಬಗಳಿಗೆ ಬೇಕಾಗುವ ಮಡಿಕೆಗಳನ್ನು ಈಗಿನಿಂದಲೇ ಸಿದ್ಧಪಡಿಸಿ ಇಡಲಾಗುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ತಯಾರಿಸಿಟ್ಟಿರುವ ಮಡಿಕೆಗಳು ಮಾರಾಟವಾಗದೆ ಧೂಳು ತಿನ್ನುತ್ತಿವೆ. ಇದರಿಂದ ಮುಂದಿನ ದಿನಗಳಿಗೆ ಕುಂಬಾರಿಕೆ ಮಾಡಲು ಆಗುತ್ತಿಲ್ಲ, ಜೊತೆಗೆ ಮಣ್ಣು ಖರೀದಿಸಲು ಆಗುತ್ತಿಲ್ಲ ಎಂದು ತಾಲೂಕಿನ ಕುಂಬಾರರು ಹೇಳುತ್ತಾರೆ. ಗ್ರಾಹಕರು ಕುಂಬಾರರ ಮನೆಗಳಿಗೆ ಬಂದು ಮಡಿಕೆ, ಕುಡಿಕೆ ಖರೀದಿಸುತ್ತಿದ್ದರು.
ಇದರಿಂದ ಪ್ರತಿದಿನ 200 ರಿಂದ 600 ರೂ.ವರೆಗೆ ಸಂಪಾದನೆ ಮಾಡುತ್ತಿದ್ದರು. ಇನ್ನೂ ಕೆಲವರು ಸಂತೆಗಳು ಮತ್ತು ಜನ ಸಂದಣಿಯಿರುವ ಸ್ಥಳಗಳಿಗೆ ತೆರಳಿ ವ್ಯಾಪಾರ ಮಾಡಿ ಬರುತ್ತಿದ್ದರು. ಈಗ ಲಾಕ್ ಡೌನ್ ಸಡಿಲಿಕೆಯಾಗದ ಕಾರಣ ವ್ಯಾಪಾರವಿಲ್ಲದೆ, ಸಂಪಾದನೆ ಇಲ್ಲದೆ ಬದುಕಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಕುಂಬಾರರು. ಕುಂಬಾರರಿಗೆ ಉತ್ತಮ ಮನೆಗಳ ವ್ಯವಸ್ಥೆ ಇಲ್ಲ, ಹೆಚ್ಚಿನವರು ತಗಡಿನ ಶೆಡ್ ಮತ್ತು ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದಾರೆ.
ಕುಲ ಕಸುಬು ಕುಂಬಾರಿಕೆ ಬಿಟ್ಟು, ಬೇರೆ ಬೇರೆ ಕೆಲಸಗಳಿಗೆ ತೊಡಗಿಸಿಕೊಂಡು ಅಭ್ಯಾಸವಿಲ್ಲ. ಜೀವನ ನಿರ್ವಹಣೆಯಲ್ಲಿ ಇವರಿಗೆ ಕೂಲಿಯೂ ಸಿಗುತ್ತಿಲ್ಲ. ಅನ್ನಭಾಗ್ಯ ಯೋಜನೆಯೇ ಆಧಾರವಾಗಿದೆ. ಎಲ್ಲಿಯವರೆಗೆ ಇದನ್ನು ನಂಬಿಕೊಳ್ಳಲು ಸಾಧ್ಯವೆಂದು ಕುಂಬಾರ ಮಲ್ಲಯ್ಯ ನೊಂದು ಹೇಳುತ್ತಾರೆ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನೀರು ತುಂಬಿಡುವ ಮಣ್ಣಿನ ಮಡಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಲಾಕ್‌ಡೌನ್ ಕಾರಣಕ್ಕೆ ಇಡೀ ತಾಲೂಕಿನಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಖರೀದಿಸಲು ಯಾರು ಬಂದಿಲ್ಲ. ವ್ಯಾಪಾರವಿಲ್ಲದೆ ಹಣಕಾಸಿಗೆ ತೊಂದರೆಯಾಗಿದೆ ಎಂದು ಕುಂಬಾರ ಈರಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಮಸ್ಯೆಗಳ ಬಗ್ಗೆ ಯಾರು ಗಮನ ಹರಿಸಿಲ್ಲ, ಸರ್ಕಾರ ನಮಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಸರ್ಕಾರ ನೀಡುವ ಮೂರು ಸಾವಿರ ಪರಿಹಾರ ಧನ ಯಾವುದಕ್ಕೂ ಸಾಲುವುದಿಲ್ಲ, ಕನಿಷ್ಠ 15 ಸಾವಿರ ಪರಿಹಾರಧನ ನೀಡಬೇಕೆಂದು ಕುಂಬಾರ ದೊಡ್ಡ ಈರಣ್ಣ ಒತ್ತಾಯಿಸಿದ್ದಾರೆ.
ಆರ್.ಬಸವರೆಡ್ಡಿ ಕರೂರು