ಬಳ್ಳಾರಿ: ಕೋವಿಡ್ ಸೋಂಕಿತರ ಶವಗಳನ್ನು ಎಳೆದು, ಎಸೆದು ಅಂತ್ಯಸಂಸ್ಕಾರ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಮುಂದಾಗಿದೆ.
ಜಿಲ್ಲೆಯಲ್ಲಿ 3 ದಿನಗಳಿಂದ ಕೋವಿಡ್ ಸೋಂಕಿಗೆ ಮೃತಪಟ್ಟಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡುತ್ತಿರುವ ಸಿಬಂದಿ ಶ್ಮಶಾನದಲ್ಲಿ ಶವಗಳನ್ನು ಎಳೆದು ತಂದು ಗುಂಡಿಗೆ ಎಸೆದು ಅಂತ್ಯಸಂಸ್ಕಾರ ಮಾಡಿದ್ದಾರೆ. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಘಟನೆ ಕುರಿತಂತೆ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ಸಂದರ್ಭ ಸಿಬಂದಿ ನಡೆದುಕೊಂಡ ರೀತಿ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ. ಕೋವಿಡ್ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗೆ ವಿನಂತಿಸುತ್ತೇನೆ.
- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿಗಳು