ಬಳ್ಳಾರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಮಾಡುವುದಕ್ಕೆ ಮತ್ತು ಹೋರಾಟ ಮಾಡುವುದಕ್ಕೆ ಸ್ವಾತಂತ್ರ್ಯ ಇದೆ. ಬಲವಂತದ ಬಂದ್ ಮಾಡಿದರೇ ಕಾನೂನಿನ ಕ್ರಮಕೈಗೊಳ್ಳಲಾಗುವುದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದರು.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ. 26ರಂದು ಬಳ್ಳಾರಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೊಸಪೇಟೆಯ ಅಮರಾವತಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಯಾವುದೇ ರೀತಿಯ ಬಲವಂತದ ಮತ್ತು ಜನರಿಗೆ ತೊಂದರೆಯಾಗುವಂತೆ ಹೋರಾಟ ಮತ್ತು ಬಂದ್ ಮಾಡಿದರೇ ಕ್ರಮಕೈಗೊಳ್ಳಲಾಗುವುದು. ಸಾಂಕೇತಿಕ ಹೋರಾಟ ಮಾಡಲಿ ಎಂದರು.
ಇದನ್ನೂ ಓದಿ:ಮರಾಠಾ ಪ್ರಾಧಿಕಾರ ಅಭಿವೃದ್ಧಿಗೆ ಸಂಬಂಧಿಸಿದ್ದು, ಭಾಷೆಗಲ್ಲ: ಸಚಿವೆ ಜೊಲ್ಲೆ ಸಮರ್ಥನೆ
ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ರಾಮನಗರ, ಯಾದಗಿರಿಗಳು ಜಿಲ್ಲೆ ಮಾಡಿದಂತೆ ವಿಜಯನಗರ ಜಿಲ್ಲೆ ಮಾಡುವುದಕ್ಕೆ ಸರಕಾರ ತೀರ್ಮಾನಿಸಿದೆ ಎಂದರು.
ವಿಜಯನಗರ ಜಿಲ್ಲೆಯ ಕೂಗು ಇಂದು ನಿನ್ನೆಯದಲ್ಲ; ಇದು ಬಹಳದಿನಗಳಿಂದ ಇತ್ತು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಬಹುದಿನಗಳ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದರು.