ಹೊಸಪೇಟೆ: ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಅಕ್ರಮವಾಗಿ ಆಸೆ-ಆಮಿಷ ಒಡ್ಡುವ ಮೂಲಕ ಗ್ರಾಪಂ ಅಧ್ಯಕ್ಷರಾಗುವುದಕ್ಕೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕಮಾರ ಕಟೀಲ್ ಆರೋಪಿಸಿದರು. ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸದಸ್ಯರಿಗೆ ಅಕ್ರಮವಾಗಿ ಆಸೆ, ಆಮಿಷಗಳನ್ನು ತೋರಿಸಿ ಅಧ್ಯಕ್ಷರಾಗುವುದಕ್ಕೆ ತೊಡಕುಂಟು ಮಾಡುತ್ತಿದ್ದಾರೆ. ಗ್ರಾಪಂ ಚುನಾವಣೆ ಮುಗಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.
ಆದರೆ ಕಾಂಗ್ರೆಸ್ ವ್ಯಾಪಾರೀಕರಣ ಪ್ರಾರಂಭಿಸಿದೆ. ಪಕ್ಷದಲ್ಲಿ ಸಂಪ್ರದಾಯಗಳಿವೆ. ಮೊದಲು ಕರೆದು ವಿಷಯವನ್ನು ತಿಳಿದುಕೊಳ್ಳಬೇಕು. ಬಳಿಕ ನೋಟಿಸ್ ನೀಡಬೇಕು. ದೆಹಲಿ ಶಿಸ್ತು ಸಮಿತಿಗೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಸಮಯ, ಸಂದರ್ಭದಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಅಸಮಾಧಾನಿತ ಸಚಿವರು, ಶಾಸಕರು ನಮ್ಮಲ್ಲಿ ಇಲ್ಲ. ಅಭಿವೃದ್ಧಿಗಾಗಿ ಸಭೆ ನಡೆಸಲಾಗುತ್ತಿದೆ. ಸಚಿವ ಗೋಪಾಲಯ್ಯ ಸೇರಿದ ಸಭೆಗೆ ಬಣ್ಣ ಹಚ್ಚಬೇಕಾಗಿಲ್ಲ. ರೆಸಾರ್ಟ್‌ನಲ್ಲಿ ನಾನೂ ಇದ್ದೆ. ಅದು ತಪ್ಪಾ, ನಾಲ್ಕು ಜನ ಸೇರಿ ಮಾತನಾಡುವುದು ತಪ್ಪಾ. ಎಲ್ಲರ ಜತೆಯಲ್ಲಿ ಮಾತನಾಡಿದ್ದೇನೆ. ಯಾವುದೇ ಅಸಮಾಧಾನವಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಇತರರಿದ್ದರು.
ಬೈಕ್ ರ್ಯಾಲಿ: ನಗರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಮುನ್ನ ಅತಿಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಬೈಕ್ ರ್ಯಾಲಿ ನಡೆಸಲಾಯಿತು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರನ್ನು ಕೂರಿಸಿ ತೆರೆದ ಜೀಪ್ ಚಲಾಯಿಸಿದರು. ಇಬ್ಬರು ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರ ಕಡೆ ಕೈಬೀಸಿದರು. ನಗರದ ಪ್ರವಾಸಿ ಮಂದಿರದಿಂದ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ, ಮಾಡ್ರನ್ ರೆಡಿಯೋ ವೃತ್ತದ ಮಾರ್ಗವಾಗಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದ ಸಮಾವೇಶದವರೆಗೆ ಸಚಿವ ಆನಂದ್ ಸಿಂಗ್ ವಾಹನ ಚಲಾಯಿಸಿದರು. ಬೈಕ್ ರ್ಯಾಲಿಯಲ್ಲಿ ಮಹಿಳಾ ಕಾರ್ಯಕರ್ತರು ಮಿಂಚಿದರು.
ಓದಿ: ಟ್ರ್ಯಾಕ್ಟರ್ ರ್ಯಾಲಿ ಯಶಸ್ಸಿಗೆ ಸಹಕರಿಸಿ