Advertisement

ಸಿಎಂ ತಮ್ಮ ಮಗನ ಪೊಲೀಸ್‌ ಭದ್ರತೆ ಹೆಚ್ಚಿಸಲಿ

05:13 PM Jan 24, 2021 | |

ಹಗರಿಬೊಮ್ಮನಹಳ್ಳಿ: ಹೋರಾಟದ ಮೂಲಕ 2ಎ ಮೀಸಲಾತಿ ಪಡೆಯುವುದು ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ಶಾಸಕ ಬಸವನಗೌಡ
ಪಾಟೀಲ್‌ ಯತ್ನಾಳ್‌ ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್‌ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಓದಿ : ಸಿಆರ್‌ಸಿ ಕಟ್ಟಡಕ್ಕೆ ಹೊಸ ರೂಪ

ಸಮಾಜದ ಹೆಸರು ಹೇಳಿ ಮಂತ್ರಿ ಆಗುತ್ತಾರೆ. ಆದರೆ ಸಮಾಜದ 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುವಲ್ಲಿ ಮೀನಮೇಷ ಮಾಡುತ್ತಾರೆ ಎಂದು ಪರೋಕ್ಷವಾಗಿ ನೂತನ ಸಚಿವ ಮುರುಗೇಶ್‌ ನಿರಾಣಿಯವರನ್ನು ಟೀಕಿಸಿದರು. ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳೋರು ಆಟ ಬಹಳ ದಿನ ನಡೆಯೋಲ್ಲ. ಸಮಾಜದ ಅಭ್ಯುದಯ, ಮುಂದಿನ ಪೀಳಿಗೆಯ ಬಗ್ಗೆ ಯೋಚನೆ ಮಾಡಬೇಕಿದೆ.
ವಾಜಪೇಯಿ ಪ್ರಧಾನಿ ಇದ್ದಾಗ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂಬುವ ಹೆಮ್ಮೆ ನನಗಿದೆ. ಕೆಲವರು ನನಗೆ ನೀಡಿರುವ ಪೊಲೀಸ್‌ ಪ್ರೊಟೆಕ್ಷನ್‌ ತೆಗೆದಿದ್ದಾರೆ. ಅದಕ್ಕೆ ನಾನು ಎದೆಗುಂದುವವನಲ್ಲ, ಅವರ ಮಗನಿಗೆ ಇನ್ನೂ ಸ್ವಲ್ಪ ಪ್ರೊಟೆಕ್ಷನ್‌ ಕೊಡಲಿ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪನವರನ್ನು ಕುಟುಕಿದರು.

ನನ್ನ ಮೇಲೆ ಐಟಿ ರೈಡ್‌ ಷಡ್ಯಂತ್ರನೂ ನಡೆಸಿದ್ದಾರೆ. ನಾನು ಯಾವುದಕ್ಕೂ ಜಗ್ಗುವವನಲ್ಲ. ನನ್ನ ಬಳಿ ಯಾವುದೂ ಅಕ್ರಮವಾಗಿ ಇಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಕೆಲವೊಂದು ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿದ್ದರಿಂದ ನಾವು ಮೀಸಲಾತಿ ಕೇಳುತ್ತಿದ್ದೇವೆ, ಅದು ನಮ್ಮ ಹಕ್ಕು. ಪಂಚಮಸಾಲಿ ಸಮಾಜ ಬಹಳ ಬಡ ಸಮಾಜ ಎಂದು ಬೇಸರ ವ್ಯಕ್ತಪಡಿಸಿದರು. ಪಂಚಮಸಾಲಿ ಸಮಾಜದ ಜನಸಂಖ್ಯೆ ಚಿತ್ರದುರ್ಗದಿಂದ ಕಡಿಮೆ ಇದ್ದು, ಪಾದಯಾತ್ರೆ ಯಶಸ್ವಿ ಗೊಳಿಸಬೇಕಾದ್ದರಿಂದ ಸಮಾಜದವರು ವಾಹನ ಸೌಲಭ್ಯಗಳನ್ನು ಮಾಡಿಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಪಾದಯಾತ್ರೆ ತುಮಕೂರು ತಲುಪಿದಾಗ ಕನಿಷ್ಠ 2ಲಕ್ಷ ಜನ ಸೇರಬೇಕು. ಪಾದಯಾತ್ರೆಗೆ ವಿಜಯಪುರದಿಂದ ವೈಯಕ್ತಿಕ ಖರ್ಚಿನಲ್ಲಿ 250 ವಾಹನಗಳಲ್ಲಿ ಪಂಚಮಸಾಲಿ ಸಮಾಜದ ಜನರನ್ನು ಕಳುಹಿಸುತ್ತೇನೆ. ಮೀಸಲಾತಿ ಪಾದಯಾತ್ರೆ ಹೋರಾಟ ಗಂಭೀರವಾಗಿ ನಡೆಯಲಿ. ಎಸ್‌.ಆರ್‌. ಕಾಶಪ್ಪನವರ ಹೋರಾಟವನ್ನು ಸ್ಮರಿಸಿದರು.

Advertisement

ಸಮಾಜದ ಹೆಸರು ಹೇಳಿ ಹಣ ತಿನ್ನೋರನ್ನು ನಂಬಬೇಡಿ. ಕೂಡಲಸಂಗಮ ಶ್ರೀಗಳ ಮೇಲೆ ನಂಬಿಕೆ ಇಡಿ. ಪಂಚಮಸಾಲಿ ಸಮಾಜದ ರಾಷ್ಟ್ರಧ್ಯಕ್ಷ ವಿಜಯಾನಂದ ಎಸ್‌.ಕಾಶಪ್ಪನವರ ಮಾತನಾಡಿ, 2ಎ ಮಿಸಲಾತಿ ಹಕ್ಕೊತ್ತಾಯಕ್ಕಾಗಿ ಈಗಾಗಲೇ 250 ಕಿಲೋಮೀಟರ್‌ ನಡೆಯಲಾಗಿದೆ. ಸಮಾಜದ ತುಳಿತಕ್ಕೊಳಗಾದ ಜನರಿಗೆ ಮೀಸಲಾತಿ ಬೇಕಾಗಿದೆ. ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಈ ಪಾದಯಾತ್ರೆ ಸಮಾಜದ ರೈತರ ಮಕ್ಕಳ ಅಭಿವೃದ್ಧಿ ಯಾತ್ರೆ. ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಸರಕಾರ ತಿಳಿಯಬೇಕು
ಎಂದು ತಿಳಿಸಿದರು.
ಲೋಕಸಭಾ ಸದಸ್ಯ ದೇವೆಂದ್ರಪ್ಪ, ಸಿದ್ದಲಿಂಗಸ್ವಾಮೀಜಿ, ಸಮಾಜದ ಮಹಿಳಾ ಘಟಕದ ವೀಣಾ ಕಾಶಪ್ಪನವರ, ಹರಿಹರ ಮಾಜಿ ಶಾಸಕ
ಶಿವಶಂಕರ, ಸಮಾಜದ ಭದ್ರವಾಡಿ ಚಂದ್ರಶೇಖರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್‌. ಭೀಮಾನಾಯ್ಕ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ನೇಮರಾಜನಾಯ್ಕ, ಮುಖಂಡರಾದ ಅಕ್ಕಿ ತೋಟೇಶ, ಹುಡೇದ ಗುರುಬಸವರಾಜ, ಸೊನ್ನದ ಗುರುಬಸವರಾಜ, ಭರಮನಗೌಡ, ರೋಹಿತ್‌, ಪಟ್ಟಣಶೆಟ್ಟಿ ಸುರೇಶ, ದೇವಿಪ್ರಸಾದ, ಮೈಲಾರ ಶಿವಕುಮಾರ ಇತರರಿದ್ದರು.

ಕಾರ್ಯಕ್ರಮವನ್ನು ವೀರೇಶ್‌ ನಿರೂಪಿಸಿದರು. ಪಾದಯಾತ್ರೆಯುದ್ದಕ್ಕೂ ವಿವಿಧ ಸ್ತಬ್ಧ ಚಿತ್ರಗಳು ಗಮನಸೆಳೆದವು.

ಓದಿ : ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

Advertisement

Udayavani is now on Telegram. Click here to join our channel and stay updated with the latest news.

Next